ಬೆಂಗಳೂರು: ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧಗಳನ್ನು ಸಂಗ್ರಹಿಸಿ, ವಿತರಣೆ ಮಾಡುತ್ತಿದ್ದ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ಏಕಕಾಲದಲ್ಲಿ ದಾಳಿ ನಡೆಸಿದೆ.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಲಭ್ಯವಾದ ನಿಖರ ಗುಪ್ತಚರ ಮಾಹಿತಿ ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಒಟ್ಟು ₹4,02,352 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ತಟ್ಟನಹಳ್ಳಿಯಲ್ಲಿರುವ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಪರವಾನಗಿ ರಹಿತ ಆವರಣದ ಮೇಲೆ ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕ ಮನೋಹರ್ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಯಾವುದೇ ಪರವಾನಗಿ ಇಲ್ಲದೆ ದಾಸ್ತಾನು ಮಾಡಲಾಗಿದ್ದ ₹2,45,352 ಮೌಲ್ಯದ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರೋಸ್ಪೇಸ್ ಪ್ರದೇಶದಲ್ಲಿರುವ ಅಮೆಜಾನ್ ಸಂಸ್ಥೆಯ ಮತ್ತೊಂದು ಪರವಾನಗಿ ರಹಿತ ಆವರಣದ ಮೇಲೂ ದಾಳಿ ನಡೆಸಲಾಗಿದೆ. ಜಿಲ್ಲಾ ಔಷಧ ಪರಿವೀಕ್ಷಕಿ ವಿಭಾ ನೇತೃತ್ವದ ತಂಡ ಪರಿಶೀಲನೆ ನಡೆಸಿ ₹1,57,000 ಮೌಲ್ಯದ ಔಷಧಗಳನ್ನು ಜಪ್ತಿ ಮಾಡಿದೆ.
ಎರಡೂ ಆವರಣಗಳಲ್ಲಿ ಔಷಧ ಸಂಗ್ರಹಣೆಗೆ ಅಗತ್ಯವಿರುವ ಮಾನ್ಯ ದಾಖಲೆಗಳು ಇಲ್ಲದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಔಷಧಗಳ ಮಾರಾಟ ಹಾಗೂ ದಾಸ್ತಾನಿನಲ್ಲಿ ಕಡ್ಡಾಯವಾಗಿ ನಿಯಮಗಳನ್ನು ಪಾಲಿಸುವಂತೆ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಹೆಸರಿನಲ್ಲಿ ನಿಯಮಬಾಹಿರವಾಗಿ ಔಷಧಗಳನ್ನು ದಾಸ್ತಾನು ಮಾಡುವ ಸಂಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದು ಆಹಾರ ಸುರಕ್ಷತೆ ಹಾಗೂ ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.



