ಬೆಂಗಳೂರು: ಯುವತಿಗೆ ಪೆಪ್ಪರ್ ಸ್ಪ್ರೇ ಬಳಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ಬಳಿಕ, ಆಕೆಯ ಬೆತ್ತಲೆ ವಿಡಿಯೋ ಹಾಗೂ ಫೋಟೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನ ಪ್ರಕಾರ, ಡಯಾಗ್ನೋಸ್ಟಿಕ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯ ಯುವರಾಜ್ ಮನೋಹರ್ ಎಂಬುವರ ವಿರುದ್ಧ ಯುವತಿ ಆರೋಪ ಮಾಡಿದ್ದಾರೆ. ಕಳೆದ ವರ್ಷ ತಮ್ಮ ಕಚೇರಿಯಲ್ಲಿ ಪೈಲ್ಸ್ ಪರೀಕ್ಷಿಸುವ ನೆಪದಲ್ಲಿ ತಮ್ಮನ್ನು ಕರೆದುಕೊಂಡು ಹೋಗಿ ಪೆಪ್ಪರ್ ಸ್ಪ್ರೇ ಬಳಸಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಅತ್ಯಾಚಾರದ ಬಳಿಕ ತಮ್ಮ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿಕೊಂಡು, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ಆರೋಪಿಸಿದ್ದಾರೆ.
ಬ್ಲ್ಯಾಕ್‌ಮೇಲ್ ಮೂಲಕ ಕಳೆದೊಂದು ವರ್ಷದಿಂದ ಹಲವು ಬಾರಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಆರೋಪಿ ವೈದ್ಯನೇ ಬಾಡಿಗೆ ಮನೆಯನ್ನು ಮಾಡಿಕೊಟ್ಟಿದ್ದು, ಬಳಿಕ ಅಲ್ಲಿಗೆ ತೆರಳಿ ಯುವತಿಯೊಂದಿಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಇತ್ತೀಚೆಗೆ ಯುವತಿಯನ್ನು ಆಕೆಯ ಜಾತಿಯ ವಿಚಾರ ಮುಂದಿಟ್ಟುಕೊಂಡು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಯಿಂದ ನೊಂದಿರುವ ಯುವತಿ, ಆರೋಪಿ ವೈದ್ಯನೊಂದಿಗೆ ಇರುವ ಫೋಟೋಗಳನ್ನು ಬಿಡುಗಡೆ ಮಾಡಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಯುವತಿಯ ದೂರಿನ ಆಧಾರದ ಮೇಲೆ ಕೊಡಿಗೇಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರ ತನಿಖೆ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಘಟನೆಯ ಸಂಪೂರ್ಣ ವಿವರಗಳು ಸ್ಪಷ್ಟವಾಗಬೇಕಿದೆ.



