ಬೆಂಗಳೂರು: ಕರ್ನಾಟಕದ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಭೀಕರ ರಸ್ತೆ ಅಪಘಾತಗಳಲ್ಲಿ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಹೂವು ಕಟಾವಿಗೆ ತೆರಳುತ್ತಿದ್ದ ಕೂಲಿ ಕಾರ್ಮಿಕರಿದ್ದ ಓಮ್ನಿ ಕಾರು ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಮೂವರು ಮಹಿಳೆಯರು ಮೃತಪಟ್ಟಿದ್ದರೆ, ಕೋಲಾರದಲ್ಲಿ ತಿರುಪತಿ ದರ್ಶನ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕೊತ್ತನೂರು ಗೇಟ್ ಸಮೀಪ ಓಮ್ನಿ ಕಾರು ಹಾಗೂ ಮಿನಿ ಗೂಡ್ಸ್ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದೆ. ಮಲ್ಲಿಕಾರ್ಜುನಪುರ ಗ್ರಾಮದ 10 ಮಂದಿ ಕೂಲಿ ಕಾರ್ಮಿಕರನ್ನು ಹೂವು ಕಟಾವು ಮಾಡಲು ರಾಮಚಂದ್ರಪ್ಪ ಎಂಬುವವರು ಓಮ್ನಿ ಕಾರಿನಲ್ಲಿ ಹುಜುಗೂರು ಗ್ರಾಮಕ್ಕೆ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಮಲ್ಲಿಕಾರ್ಜುನಪುರ ಮೂಲದ ಮೂವರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ತಕ್ಷಣ ಶಿಡ್ಲಘಟ್ಟ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ದೊಡ್ಡಕಾರಿ ಗ್ರಾಮದ ಬಳಿ ಚೆನ್ನೈ-ಬೆಂಗಳೂರು ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ತಿರುಪತಿಯಲ್ಲಿ ದರ್ಶನ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ಬೆಂಗಳೂರು ಮೂಲದ ದೇವೇಂದ್ರ ಕುಮಾರ್ (40), ಜಿಷ್ಣು (15), ದೀಕ್ಷಿತಾ (20) ಮತ್ತು ಶಾರದಾಬಾಯಿ (70) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನುಳಿದ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೇತಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



