ಬಳ್ಳಾರಿ: ಬಿ.ವೈ. ವಿಜಯೇಂದ್ರ ನೇತೃತ್ವದ ‘ಬಳ್ಳಾರಿ ಚಲೋ’ ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನ ಬಳಸಲು ಬಿಜೆಪಿ ಸಲ್ಲಿಸಿದ್ದ ಮನವಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ. ಸೆಪ್ಟೆಂಬರ್ 10ರಂದು ಮಧ್ಯಾಹ್ನ 3ರಿಂದ ರಾತ್ರಿ 8ರವರೆಗೆ ಸಮಾವೇಶ ನಡೆಸಲು ಬಿಜೆಪಿ ಮುಖಂಡರು ಅನುಮತಿ ಕೋರಿದ್ದರು. ಆದರೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಮೈದಾನ ಬಳಕೆಗೆ ಒಪ್ಪಿಗೆ ನೀಡಿಲ್ಲ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಆವರಣ, ಮೈದಾನ ಹಾಗೂ ಇತರ ಸಾರ್ವಜನಿಕ ಆಸ್ತಿಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಸಂಘಟನೆಗಳ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ಸರ್ಕಾರದ ಆದೇಶದ ಆಧಾರದಲ್ಲಿ ಅನುಮತಿ ನಿರಾಕರಿಸಲಾಗಿದೆ. ಕಳೆದ ವರ್ಷದ ಅಕ್ಟೋಬರ್ 18ರಂದು ಸಚಿವ ಸಂಪುಟ ಕೈಗೊಂಡ ನಿರ್ಧಾರದಂತೆ ಶಾಲೆಗಳು, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಸೇರಿದಂತೆ ಸರ್ಕಾರಿ ಆಸ್ತಿಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಿದೆ.
ಖಾಸಗಿ ಸಂಘ-ಸಂಸ್ಥೆಗಳು ಅಥವಾ ಗುಂಪುಗಳು ಸರ್ಕಾರಿ ಆಸ್ತಿಗಳಲ್ಲಿ ಯಾವುದೇ ಕಾರ್ಯಕ್ರಮ ಅಥವಾ ಸಮಾವೇಶ ಆಯೋಜಿಸಬೇಕಾದರೂ ಪೂರ್ವಾನುಮತಿ ಪಡೆಯಬೇಕು ಎಂಬ ಮಾರ್ಗಸೂಚಿಯನ್ನು ಸರ್ಕಾರ ಜಾರಿಗೊಳಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದ ಮುಂಗಾರು ಅಧಿವೇಶನದಲ್ಲಿ ‘ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಗಳ ಬಳಕೆ ನಿಯಂತ್ರಣ ಮಸೂದೆ-2026’ ಮಂಡಿಸಲು ಮುಂದಾಗಿತ್ತು. ಆದರೆ ವಿರೋಧ ಪಕ್ಷಗಳ ಧರಣಿಯಿಂದಾಗಿ ಮಸೂದೆ ಚರ್ಚೆಗೆ ಬಂದಿರಲಿಲ್ಲ.
ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈ ಹಿಂದೆ ಆದೇಶಕ್ಕೆ ಮಧ್ಯಂತರ ತಡೆ ನೀಡಿ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ ನಿಯಮವನ್ನು ಉಲ್ಲೇಖಿಸಿ ಬಿಜೆಪಿ ಸಮಾವೇಶಕ್ಕೆ ಮೈದಾನ ನಿರಾಕರಿಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಳ್ಳಾರಿ ಚಲೋ ಪಾದಯಾತ್ರೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಸಂಡೂರು ವಿಧಾನಸಭಾ ಕ್ಷೇತ್ರದಿಂದ ಇಂದು ಯಾತ್ರೆ ಆರಂಭವಾಗಿದೆ. ನಾಳೆ ಪಾದಯಾತ್ರೆ ಬಳ್ಳಾರಿ ತಲುಪಲಿದ್ದು, ಬಳಿಕ ಸಮಾರೋಪ ಸಮಾರಂಭ ನಡೆಯಲಿದೆ.



