ಬೆಂಗಳೂರು: ಹಿರಿಯ ನಟಿ ಲಕ್ಷ್ಮೀದೇವಿ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿ ಸುಳ್ಳು ಎಂದು ಕುಟುಂಬ ಸ್ಪಷ್ಟಪಡಿಸಿದೆ. 92 ವರ್ಷದ ಲಕ್ಷ್ಮೀದೇವಿ ಅವರು ಆರೋಗ್ಯವಾಗಿದ್ದು, ನಿಧನರಾಗಿಲ್ಲ ಎಂದು ಮೊಮ್ಮಗಳು ದೀಪಿಕಾ ಶರಣ್ ತಿಳಿಸಿದ್ದಾರೆ. ಸುಳ್ಳು ಸುದ್ದಿಯನ್ನು ಯಾರೂ ಹರಡಬಾರದು ಎಂದು ಅವರು ಮನವಿ ಮಾಡಿದ್ದು, ಲಕ್ಷ್ಮೀದೇವಿ ಅವರೂ ವಿಡಿಯೋ ಮೂಲಕ ತಮ್ಮ ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಿರಿಯ ಕಲಾವಿದರ ನಿಧನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳು ಹರಡುವುದು ಇದೇ ಮೊದಲೇನಲ್ಲ. ಈ ಹಿಂದೆ ನಟ ದೊಡ್ಡಣ್ಣ ಅವರ ಬಗ್ಗೆಯೂ ಇದೇ ರೀತಿಯ ವದಂತಿ ಹರಡಿತ್ತು. ಆಗ ದೊಡ್ಡಣ್ಣ ಅವರೇ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿ ತಾವು ಆರೋಗ್ಯವಾಗಿರುವುದಾಗಿ ತಿಳಿಸಿ ಫೇಕ್ ನ್ಯೂಸ್‌ಗೆ ತೆರೆ ಎಳೆದಿದ್ದರು. ಇದೀಗ ಲಕ್ಷ್ಮೀದೇವಿ ಅವರ ವಿಚಾರದಲ್ಲೂ ಅಂತಹದ್ದೇ ವದಂತಿ ಹರಡಿದೆ.
ಕನ್ನಡ ಚಿತ್ರರಂಗದ ಕಪ್ಪು-ಬಿಳುಪು ಕಾಲದಿಂದಲೂ ಅಭಿನಯಿಸುತ್ತಿರುವ ಲಕ್ಷ್ಮೀದೇವಿ ಅವರು ಸುಮಾರು 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ವಿವಿಧ ಬಗೆಯ ಪೋಷಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಹಲವು ದಶಕಗಳಿಂದ ಕನ್ನಡ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ.
‘ಶ್ರೀನಿವಾಸ ಕಲ್ಯಾಣ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅವರು ‘ಭಕ್ತ ಕನಕದಾಸ’, ‘ಬಂಗಾರದ ಮನುಷ್ಯ’, ‘ವೀರ ಕೇಸರಿ’ ಸೇರಿದಂತೆ ಹಲವು ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿದ ಅವರು ವೈವಿಧ್ಯಮಯ ಪಾತ್ರಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾರೆ.
‘ಕಳ್ಳರ ಕಳ್ಳ’ ಚಿತ್ರದಲ್ಲಿನ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವ ಲಕ್ಷ್ಮೀದೇವಿ ಅವರು ತಾಯಿ, ಪೋಷಕ ನಟಿ ಸೇರಿದಂತೆ ಹಲವು ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ದೀರ್ಘಕಾಲದ ತಮ್ಮ ನಟನಾ ಪಯಣದ ಮೂಲಕ ಕನ್ನಡ ಚಿತ್ರರಂಗಕ್ಕೆ ನೀಡಿರುವ ಅವರ ಕೊಡುಗೆ ಗಮನಾರ್ಹವಾಗಿದೆ.



