ವಿಜಯಪುರ: ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಖಚಿತವಾದ ಬಳಿಕವೇ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್. ಅಶೋಕ್, ಸುನೀಲ್ ಕುಮಾರ್ ಸೇರಿದಂತೆ ಹಲವರು ಸದನದ ಬಾವಿಗೆ ಇಳಿದು ಹೋರಾಟ ನಡೆಸಿದ್ದರು. ಆದರೆ ಆಗ ವಿಜಯೇಂದ್ರ ಐದು ನಿಮಿಷವೂ ಸದನದ ಬಾವಿಯಲ್ಲಿ ನಿಲ್ಲಲಿಲ್ಲ ಎಂದು ಟೀಕಿಸಿದರು.
ಬರೀ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದರೆ ಕ್ರೆಡಿಟ್ ಬರುತ್ತದೆಯೇ ಎಂದು ಪ್ರಶ್ನಿಸಿದ ಯತ್ನಾಳ್, ರಾಜ್ಯಾಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆಯುವುದು ಖಚಿತ ಎಂಬ ಭಯ ವಿಜಯೇಂದ್ರ ಅವರಿಗೆ ಬಂದಿದೆ. ಹೀಗಾಗಿ ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಹಾಗೂ ಹೀರೋ ಆಗಲು ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತದೆ, ಯಾರಿಗೆ ಪ್ಲಸ್ ಆಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಳ್ಳುವ ಭಯದಿಂದಲೇ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು. ಹೋರಾಟ ಮತ್ತು ಪಾದಯಾತ್ರೆ ಮಾಡುವುದಾದರೆ ಕೆಪಿಎಸ್‌ಸಿ ಹಗರಣದ ವಿರುದ್ಧ ಹೋರಾಟ ನಡೆಸಲಿ ಎಂದು ಯತ್ನಾಳ್ ಸಲಹೆ ನೀಡಿದರು.



