HomeGadag Newsಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ

ಗಣೇಶೋತ್ಸವಕ್ಕೆ ಕಟ್ಟುನಿಟ್ಟಿನ ನಿಯಮ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಸಾರ್ವಜನಿಕ ಗಣೇಶೋತ್ಸವವನ್ನು ಶಾಂತಿ, ಸೌಹಾರ್ದ ಹಾಗೂ ಶಿಸ್ತುಬದ್ಧವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಠಾಣೆ ಪಿಎಸ್‌ಐ ಐಶ್ವರ್ಯ ನಾಗರಾಳ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ನಡೆದ ಗಣೇಶೋತ್ಸವದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಣೇಶೋತ್ಸವ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ವೃದ್ಧರು, ಮಕ್ಕಳು, ರೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಧ್ವನಿವರ್ಧಕ ಬಳಕೆಯಲ್ಲಿಯೂ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ವಿಸರ್ಜನಾ ಮೆರವಣಿಗೆಯನ್ನು ಅನಗತ್ಯವಾಗಿ ವಿಳಂಬ ಮಾಡದೆ ರಾತ್ರಿ 10 ಗಂಟೆಯೊಳಗೆ ವಿಸರ್ಜನೆ ಪೂರ್ಣಗೊಳಿಸುವುದು ಕಡ್ಡಾಯ. ತಡರಾತ್ರಿವರೆಗೆ ಮೆರವಣಿಗೆ ನಡೆಸುವುದು, ಅತಿಯಾದ ಧ್ವನಿವರ್ಧಕ ಬಳಸುವುದು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಚಟುವಟಿಕೆಗಳಿಗೆ ಅವಕಾಶವಿಲ್ಲ. ಮೆರವಣಿಗೆಯನ್ನು ನಿಗದಿತ ಮಾರ್ಗದಲ್ಲಿಯೇ ನಡೆಸಬೇಕು. ಸಂಚಾರಕ್ಕೆ ಅಡ್ಡಿಯಾಗದಂತೆ ಸ್ವಯಂಸೇವಕರನ್ನು ನಿಯೋಜಿಸಿ ಪೊಲೀಸ್ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಬೇಕು ಎಂದು ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘ–ಸಂಸ್ಥೆಗಳು ಹಾಗೂ ಯುವಕ ಮಂಡಳಿಗಳು ಸಂಬಂಧಪಟ್ಟ ಇಲಾಖೆಯಿಂದ ಅಗತ್ಯ ಅನುಮತಿ ಪಡೆಯಬೇಕು. ವಿದ್ಯುತ್ ಸಂಪರ್ಕ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅನುಮತಿಯೂ ಕಡ್ಡಾಯವಾಗಿದೆ. ಪೆಂಡಾಲ್ ಹಾಗೂ ಬ್ಯಾನರ್ ಅಳವಡಿಸುವಾಗ ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯುತ್ ದೀಪಾಲಂಕಾರದಲ್ಲಿ ಕಳಪೆ ತಂತಿ ಹಾಗೂ ಅಸುರಕ್ಷಿತ ಸಂಪರ್ಕ ಬಳಸಬಾರದು ಎಂದರು.

ರಘುನಾಥ ಕೊಂಡಿ ಮಾತನಾಡಿ, ಗಣೇಶೋತ್ಸವವು ಭಕ್ತಿ, ಸಂಸ್ಕೃತಿ ಹಾಗೂ ಸಾಮರಸ್ಯದ ಹಬ್ಬವಾಗಬೇಕು. ಯಾವುದೇ ಧರ್ಮ, ಸಮುದಾಯ ಅಥವಾ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ, ಹಾಡು, ಭಾಷಣ ಹಾಗೂ ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ, ವಿಡಿಯೊ ಹಾಗೂ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಯುವಕರು ಎಚ್ಚರ ವಹಿಸಬೇಕು ಎಂದರು.

ಮುಖಂಡ ಮಂಜುನಾಥ ಹೆಗಡೆ ಮಾತನಾಡಿ, ಗಣೇಶೋತ್ಸವ ಅಬ್ಬರದ ಮೆರವಣಿಗೆ ಹಾಗೂ ಕಿವಿಗಡಚಿಕ್ಕುವ ಸಂಗೀತಕ್ಕೆ ಸೀಮಿತವಾಗದೆ ಪರಿಸರ ಸ್ನೇಹಿ ಆಚರಣೆ, ಭಜನೆ, ದೇಶಭಕ್ತಿ ಗೀತೆ, ಮಕ್ಕಳ ಸ್ಪರ್ಧೆಗಳು, ಆರೋಗ್ಯ ಹಾಗೂ ರಕ್ತದಾನ ಶಿಬಿರದಂತಹ ಸಮಾಜಮುಖಿ ಕಾರ್ಯಕ್ರಮಗಳಿಗೆ ವೇದಿಕೆಯಾಗಬೇಕು ಎಂದರು.

ಮುಖಂಡ ಸಂತೋಷ್ ಮಣ್ಣೋಡ್ಡರ್, ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಮಾತನಾಡಿದರು. ಮಂಜುನಾಥ ಬಿ.ಎಸ್.ಎಸ್. ಮಣ್ಣೋಡ್ಡರ್, ರುದ್ರೇಶ್ ಕೋಟಗಿ, ನಿಂಗರಾಜ ಕೆಂಗಾರ, ಬಸಪ್ಪ, ಎಸ್.ಸಿ. ಸಂಗನಾಳಮಠ, ಬಸವರಾಜ ವಂಕಲಕುಂಟಿ, ವೀರಣ್ಣ ಗುಜಮಾಗಡಿ, ಶ್ರೀಕಾಂತ ಹೊಸಮನಿ, ಮುತ್ತುರಾಜ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆಯವರೆಗೆ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಯೋಜಕರು ಮುನ್ನೆಚ್ಚರಿಕೆ ವಹಿಸಬೇಕು. ನಿಯಮ ಉಲ್ಲಂಘಿಸಿ ಡಿಜೆ ಬಳಸಿದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

— ಐಶ್ವರ್ಯ ನಾಗರಾಳ, ಪಿಎಸ್‌ಐ, ನರೇಗಲ್ಲ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img