ಚಾಮರಾಜನಗರ: ವನ್ಯಜೀವಿಗಳ ಸಹಜ ಚಲನವಲನಕ್ಕೆ ತೊಂದರೆಯಾಗದಂತೆ ಹಾಗೂ ಪ್ರವಾಸಿಗರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಸಫಾರಿ ವಾಹನಗಳಿಗೆ ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾ ಅಳವಡಿಸಲಾಗಿದೆ.
ಬಂಡೀಪುರ ಸಫಾರಿ ವಲಯದಲ್ಲಿ ಸಂಚರಿಸುವ 18 ವಾಹನಗಳಿಗೆ ಜಿಪಿಎಸ್ ಮತ್ತು ಡ್ಯಾಶ್ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, ಸಫಾರಿ ವೇಳೆ ವಾಹನಗಳ ಚಲನವಲನದ ಮೇಲೆ ನಿಗಾ ಇಡಲು ಇದರಿಂದ ಸಾಧ್ಯವಾಗಲಿದೆ.
ಸಫಾರಿ ವೇಳೆ ಹುಲಿ, ಚಿರತೆ ಸೇರಿದಂತೆ ವನ್ಯಜೀವಿಗಳು ಕಾಣಿಸಿಕೊಂಡಾಗ ಚಾಲಕರು ಇತರೆ ಸಫಾರಿ ವಾಹನಗಳಿಗೆ ಮಾಹಿತಿ ನೀಡುತ್ತಿದ್ದರು. ಇದರಿಂದ ಒಂದೇ ಸಮಯದಲ್ಲಿ ಹಲವು ವಾಹನಗಳು ಪ್ರಾಣಿಗಳು ಇರುವ ಸ್ಥಳಕ್ಕೆ ತೆರಳಿ ಜಮಾಯಿಸುತ್ತಿದ್ದವು.
ಹಲವು ವಾಹನಗಳು ಒಂದೇ ಕಡೆ ಸೇರುವುದರಿಂದ ವನ್ಯಜೀವಿಗಳ ಸಹಜ ಸಂಚಾರ ಹಾಗೂ ಬೇಟೆ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆ ಇತ್ತು. ಇದನ್ನು ತಡೆಯಲು ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾ ವ್ಯವಸ್ಥೆ ಅಳವಡಿಸಲಾಗಿದೆ.
ಸಫಾರಿ ವಲಯದ ಹೊರಗಿನ ನಿರ್ಬಂಧಿತ ಪ್ರದೇಶಗಳಿಗೂ ಕೆಲವರು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೂರುಗಳು ಕೇಳಿಬಂದಿದ್ದವು. ಇಂತಹ ಸ್ಥಳಗಳಿಗೆ ಪ್ರವಾಸಿಗರನ್ನು ಕರೆದೊಯ್ಯುವುದನ್ನು ತಡೆಯಲು ಹಾಗೂ ವಾಹನಗಳ ಸಂಚಾರದ ಮೇಲೆ ನಿಗಾ ವಹಿಸಲು ಈ ತಂತ್ರಜ್ಞಾನ ಸಹಕಾರಿಯಾಗಲಿದೆ.
ಈ ಹಿಂದೆ ನಿರ್ಬಂಧಿತ ಪ್ರದೇಶಗಳಲ್ಲಿ ಪ್ರವಾಸಿಗರು ತೆರಳಿದ ಸಂದರ್ಭದಲ್ಲಿ ವನ್ಯಜೀವಿಗಳಿಂದ ದಾಳಿಗೆ ಒಳಗಾದ ಘಟನೆಗಳೂ ನಡೆದಿದ್ದವು. ಹೀಗಾಗಿ ಪ್ರವಾಸಿಗರು ಹಾಗೂ ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.
ಈ ಕುರಿತು ಗೋಪಾಲಸ್ವಾಮಿ ಬೆಟ್ಟ ವಲಯದ ಅರಣ್ಯಾಧಿಕಾರಿ ಕೆ.ಪಿ. ಸತೀಶ್ ಕುಮಾರ್ ಮಾತನಾಡಿ, ಜಿಪಿಎಸ್ ಹಾಗೂ ಡ್ಯಾಶ್ ಕ್ಯಾಮೆರಾ ಅಳವಡಿಕೆಯಿಂದ ಸಫಾರಿ ವಾಹನಗಳು ಸಂಚರಿಸುವ ಮಾರ್ಗ, ವೇಗ ಹಾಗೂ ಸಫಾರಿ ವೇಳೆ ನಡೆಯುವ ಚಟುವಟಿಕೆಗಳ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸಫಾರಿ ವೇಳೆ ನಡೆಯುವ ಘಟನೆಗಳನ್ನು ದಾಖಲಿಸಿಕೊಳ್ಳಲು ಸಾಧ್ಯವಾಗಲಿದ್ದು, ವನ್ಯಜೀವಿಗಳು ಹಾಗೂ ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ತಂತ್ರಜ್ಞಾನ ಅಳವಡಿಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.



