ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಶಿಕ್ಷಣ ತಜ್ಞ, ಸಾಹಿತಿ ಹಾಗೂ ಸಮಾಜ ಸೇವಕ ಅಮರೇಶ್ ಮಲ್ಲಣ್ಣವರ ಅವರಿಗೆ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸುಧಾರಣೆಗೆ ಒತ್ತು ನೀಡುವುದರ ಜತೆಗೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನಿರಂತರವಾಗಿ ಶ್ರಮಿಸುತ್ತಿರುವ ಅಮರೇಶ್ ಮಲ್ಲಣ್ಣವರ ಅವರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಅವರಿಗೆ ಅಗತ್ಯ ಮಾರ್ಗದರ್ಶನ ಹಾಗೂ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅವರು ಕೈಗೊಂಡಿರುವ ಕಾರ್ಯಗಳು ಪ್ರಶಸ್ತಿಗೆ ಪ್ರಮುಖ ಕಾರಣವಾಗಿವೆ.
ಇದರೊಂದಿಗೆ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮದೇ ಆದ ಕೊಡುಗೆ ನೀಡಿರುವ ಅವರು, ಸಾಮಾಜಿಕ ಕಾಳಜಿ ಹಾಗೂ ಶಿಕ್ಷಣದ ಮಹತ್ವವನ್ನು ಜನರಲ್ಲಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಗ್ರಾಮೀಣ ಹಿನ್ನೆಲೆಯಿಂದ ಬೆಳೆದು ಶಿಕ್ಷಣ, ಸಾಹಿತ್ಯ ಹಾಗೂ ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿರುವ ಅಮರೇಶ್ ಮಲ್ಲಣ್ಣವರಿಗೆ ಗೌರವ ಡಾಕ್ಟರೇಟ್ ಲಭಿಸಿರುವುದು ಸವಡಿ ಗ್ರಾಮ ಸೇರಿದಂತೆ ರೋಣ ತಾಲೂಕಿನ ಜನರಲ್ಲಿ ಸಂತಸ ಮೂಡಿಸಿದೆ.
ಅವರ ಸಾಧನೆಗೆ ವಿವಿಧ ಗಣ್ಯರು, ಶಿಕ್ಷಣ ಪ್ರೇಮಿಗಳು, ಸಾಹಿತಿಗಳು, ಸ್ನೇಹಿತರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿಯೂ ಶಿಕ್ಷಣ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ಇನ್ನಷ್ಟು ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದ್ದಾರೆ.



