HomeBengaluru Newsಮುಂಗಾರು ಮಳೆ ಕೊರತೆ ಎಫೆಕ್ಟ್; ಕರ್ನಾಟಕದಲ್ಲಿ 4.28 ಲಕ್ಷ ಹೆಕ್ಟೇರ್ ಭತ್ತದ ಬಿತ್ತನೆ ಇಳಿಕೆ!

ಮುಂಗಾರು ಮಳೆ ಕೊರತೆ ಎಫೆಕ್ಟ್; ಕರ್ನಾಟಕದಲ್ಲಿ 4.28 ಲಕ್ಷ ಹೆಕ್ಟೇರ್ ಭತ್ತದ ಬಿತ್ತನೆ ಇಳಿಕೆ!

For Dai;y Updates Join Our whatsapp Group

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದ ಪರಿಣಾಮ ಭತ್ತದ ಬಿತ್ತನೆ ಪ್ರಮಾಣ ಗಣನೀಯವಾಗಿ ಕುಸಿದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ 4.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಡಿಮೆಯಾಗಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲೇ ಭತ್ತದ ಬಿತ್ತನೆ ಪ್ರಮಾಣದಲ್ಲಿ ಅತಿ ಹೆಚ್ಚು ಇಳಿಕೆ ಕಂಡುಬಂದಿದೆ.

ದೇಶಾದ್ಯಂತವೂ ಭತ್ತದ ಬಿತ್ತನೆ ಪ್ರಮಾಣ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 438.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದರೆ, ಈ ವರ್ಷ ಅದು 421.82 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಅಂದರೆ ದೇಶದಲ್ಲಿ ಒಟ್ಟಾರೆ 16.37 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಕಡಿಮೆಯಾಗಿದ್ದು, ಶೇ.3.71ರಷ್ಟು ಕುಸಿತ ದಾಖಲಾಗಿದೆ.

ಪ್ರಮುಖ ಭತ್ತ ಬೆಳೆಯುವ ಜಿಲ್ಲೆಗಳಲ್ಲೂ ಹಿನ್ನಡೆ:

ಕರ್ನಾಟಕದಲ್ಲಿ ಭತ್ತ ಬೆಳೆಯುವ ಪ್ರಮುಖ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ಶಿವಮೊಗ್ಗ, ಮಂಡ್ಯ ಹಾಗೂ ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳು ಮಂದಗತಿಗೆ ತಲುಪಿವೆ.

ವಿಶೇಷವಾಗಿ ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ಭತ್ತದ ಬಿತ್ತನೆ ಮೇಲೆ ನೇರ ಪರಿಣಾಮ ಬೀರಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ಬಿತ್ತನೆಯನ್ನು ಮುಂದೂಡುವ ಅಥವಾ ಪರ್ಯಾಯ ಬೆಳೆಗಳತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕರ್ನಾಟಕದ ಬಳಿಕ ತೆಲಂಗಾಣದಲ್ಲಿ 3.61 ಲಕ್ಷ ಹೆಕ್ಟೇರ್, ಆಂಧ್ರಪ್ರದೇಶದಲ್ಲಿ 1.91 ಲಕ್ಷ ಹೆಕ್ಟೇರ್, ಉತ್ತರ ಪ್ರದೇಶದಲ್ಲಿ 1.84 ಲಕ್ಷ ಹೆಕ್ಟೇರ್ ಹಾಗೂ ಮಧ್ಯಪ್ರದೇಶದಲ್ಲಿ 1.75 ಲಕ್ಷ ಹೆಕ್ಟೇರ್ ಭತ್ತದ ಬಿತ್ತನೆ ಇಳಿಕೆಯಾಗಿದೆ.

ದ್ವಿದಳ ಧಾನ್ಯ ಬಿತ್ತನೆಯಲ್ಲೂ ಕರ್ನಾಟಕ ಹಿನ್ನಡೆ:

ಭತ್ತದ ಜತೆಗೆ ದ್ವಿದಳ ಧಾನ್ಯಗಳ ಬಿತ್ತನೆಯಲ್ಲೂ ಕರ್ನಾಟಕ ಹಿನ್ನಡೆ ಕಂಡಿದೆ. ದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಕಳೆದ ವರ್ಷ 115.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ ಬಿತ್ತನೆಯಾಗಿದ್ದರೆ, ಈ ವರ್ಷ ಅದು 117.13 ಲಕ್ಷ ಹೆಕ್ಟೇರ್‌ಗೆ ಏರಿಕೆಯಾಗಿದೆ. ಒಟ್ಟಾರೆ 1.84 ಲಕ್ಷ ಹೆಕ್ಟೇರ್‌ ಹೆಚ್ಚಳ ದಾಖಲಾಗಿದೆ.

ಆದರೆ ಕರ್ನಾಟಕದಲ್ಲಿ ಮಾತ್ರ 2.07 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯಗಳ ಬಿತ್ತನೆ ಕಡಿಮೆಯಾಗಿದೆ. ಮಹಾರಾಷ್ಟ್ರದಲ್ಲಿ 2.60 ಲಕ್ಷ ಹೆಕ್ಟೇರ್ ಹಾಗೂ ಒಡಿಶಾದಲ್ಲಿ 0.61 ಲಕ್ಷ ಹೆಕ್ಟೇರ್ ಇಳಿಕೆ ಕಂಡುಬಂದಿದೆ.

ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶದಲ್ಲಿ 3.97 ಲಕ್ಷ ಹೆಕ್ಟೇರ್, ಜಾರ್ಖಂಡ್‌ನಲ್ಲಿ 0.98 ಲಕ್ಷ, ತೆಲಂಗಾಣದಲ್ಲಿ 0.90 ಲಕ್ಷ, ರಾಜಸ್ಥಾನದಲ್ಲಿ 0.57 ಲಕ್ಷ ಹಾಗೂ ಮಧ್ಯಪ್ರದೇಶದಲ್ಲಿ 0.38 ಲಕ್ಷ ಹೆಕ್ಟೇರ್ ದ್ವಿದಳ ಧಾನ್ಯಗಳ ಬಿತ್ತನೆ ಹೆಚ್ಚಾಗಿದೆ.

ರೈತರಲ್ಲಿ ಹೆಚ್ಚಿದ ಆತಂಕ:

ಒಟ್ಟಾರೆ, ಮುಂಗಾರು ಮಳೆಯ ಕೊರತೆ ಕರ್ನಾಟಕದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತಿದೆ. ಪ್ರಮುಖ ಆಹಾರ ಬೆಳೆಗಳಾದ ಭತ್ತ ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಪ್ರಮಾಣ ಕುಸಿದಿರುವುದು ರೈತರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಮಳೆ ಹಾಗೂ ನೀರಿನ ಲಭ್ಯತೆ ಹೇಗಿರಲಿದೆ ಎಂಬುದರ ಮೇಲೆ ಕೃಷಿ ಚಟುವಟಿಕೆಗಳ ಪ್ರಗತಿ ಅವಲಂಬಿತವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img