ವಿಜಯಸಾಕ್ಷಿ ಸುದ್ದಿ, ಗದಗ: 18 ವರ್ಷ ಪೂರ್ಣಗೊಂಡಿರುವ ಹಾಗೂ ಶೀಘ್ರದಲ್ಲೇ 18 ವರ್ಷ ಪೂರೈಸಲಿರುವ ಎಲ್ಲ ಅರ್ಹ ಯುವಕರನ್ನು ಗುರುತಿಸಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಆದ್ಯತೆ ನೀಡಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR)-2026 ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಹಾಗೂ ಅರ್ಹ ನಾಗರಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರೇರೇಪಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸೆ.19 ಹಾಗೂ 20ರಂದು ‘ಯಾವುದೇ ಅರ್ಹ ಮತದಾರ ಮತದಾನದಿಂದ ಹೊರಗುಳಿಯಬಾರದು’ ಎಂಬ ಧ್ಯೇಯವಾಕ್ಯದೊಂದಿಗೆ ವಿಶೇಷ ಮತದಾರರ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಈ ವೇಳೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದ ಅರ್ಹ ನಾಗರಿಕರನ್ನು ಗುರುತಿಸಿ, ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪದವಿ, ಐಟಿಐ, ಪಾಲಿಟೆಕ್ನಿಕ್ ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶ ನೋಂದಣಿ ಆಧರಿಸಿ 18 ವರ್ಷ ಪೂರ್ಣಗೊಂಡ ಹಾಗೂ ಶೀಘ್ರದಲ್ಲೇ 18 ವರ್ಷ ಪೂರೈಸಲಿರುವ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಬೇಕು. ಹೆಸರು, ವಯಸ್ಸು, ಜನ್ಮ ದಿನಾಂಕ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಅರ್ಹರನ್ನು ಗುರುತಿಸುವಂತೆ ಸೂಚಿಸಿದರು.
ಕಾಲೇಜುಗಳಲ್ಲಿನ ಮತದಾರರ ಸಾಕ್ಷರತಾ ಕ್ಲಬ್ಗಳ (ELC) ಸದಸ್ಯರು ಹಾಗೂ ನೋಡಲ್ ಅಧಿಕಾರಿಗಳು ನೋಂದಣಿ ಪ್ರಕ್ರಿಯೆ, ಅಗತ್ಯ ದಾಖಲೆಗಳು, ಅರ್ಹತೆ ಮತ್ತು ಮತದಾನದ ಹಕ್ಕಿನ ಕುರಿತು ವಿದ್ಯಾರ್ಥಿಗಳಿಗೆ ನಿರಂತರ ಜಾಗೃತಿ ಮೂಡಿಸಬೇಕು. ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಚುನಾವಣಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ನೋಂದಣಿ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದರು.
ಎನ್ಎಸ್ಎಸ್, ಎನ್ಸಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಕರ ಸಹಯೋಗದಲ್ಲಿ ಸೈಕಲ್, ಬೈಕ್ ರ್ಯಾಲಿ ಸೇರಿದಂತೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದರು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ನ ಡಿಜಿಟಲ್ ಹಾಗೂ ಭೌತಿಕ ಹೋಲ್ಡಿಂಗ್ಗಳ ಮೂಲಕವೂ ಮತದಾರರ ನೋಂದಣಿ ಮತ್ತು ಮತದಾನದ ಮಹತ್ವದ ಸಂದೇಶ ತಲುಪಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಅರ್ಹ ಪ್ರತಿಯೊಬ್ಬ ಯುವ ಮತದಾರನ ಹೆಸರನ್ನೂ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವುದು ಅಭಿಯಾನದ ಪ್ರಮುಖ ಉದ್ದೇಶ. ಯುವಜನರು ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.
— ಮುಕುಲ್ ಜೈನ್, ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ



