HomeGadag Newsಗದಗ ಜಿಲ್ಲೆಯಲ್ಲಿ ಡಿಜೆ ಸೌಂಡ್‌ಗೆ ಬ್ರೇಕ್: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ಗದಗ ಜಿಲ್ಲೆಯಲ್ಲಿ ಡಿಜೆ ಸೌಂಡ್‌ಗೆ ಬ್ರೇಕ್: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಹಾಗೂ ಜನಸಾಮಾನ್ಯರ ನೆಮ್ಮದಿಯ ಹಿತದೃಷ್ಟಿಯಿಂದ ಜಿಲ್ಲೆಯಾದ್ಯಂತ ಡಿಜೆ ವ್ಯವಸ್ಥೆ, ಬಾಸ್ ಬೂಸ್ಟರ್, ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬೆಲ್‌ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಶಬ್ದವರ್ಧಕ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಆದೇಶ ಹೊರಡಿಸಿದ್ದಾರೆ.

ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮಗಳು) ನಿಯಮಗಳು, 2000 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಕಲಂ 163ರಡಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರ ಬಳಸಿ ಈ ಆದೇಶ ಜಾರಿಗೊಳಿಸಲಾಗಿದೆ.

ವಸತಿ ಪ್ರದೇಶಗಳು ಹಾಗೂ ಆಸ್ಪತ್ರೆ, ಶಾಲೆ, ನ್ಯಾಯಾಲಯ ಮತ್ತು ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯ ಸೈಲೆಂಟ್ ಝೋನ್‌ಗಳಲ್ಲಿ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಇಳಿಜಾರು ರಸ್ತೆಗಳು, ಸಂಚಾರ ದಟ್ಟಣೆ ಪ್ರದೇಶಗಳು ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲೂ ಶಬ್ದ ನಿಯಂತ್ರಣ ಕಡ್ಡಾಯವಾಗಿದೆ.

ಅಲ್ಲದೆ, ಜಿಲ್ಲೆಯಾದ್ಯಂತ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಡಿಜೆ ಹಾಗೂ ಹೆಚ್ಚಿನ ಶಬ್ದ ಉಂಟುಮಾಡುವ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಆದೇಶ ಉಲ್ಲಂಘನೆ ಕಂಡುಬಂದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ತಕ್ಷಣ ಸ್ಥಗಿತಗೊಳಿಸಬಹುದು. ಡಿಜೆ ಹಾಗೂ ಶಬ್ದವರ್ಧಕ ಉಪಕರಣಗಳನ್ನು ಜಪ್ತಿ ಮಾಡುವುದು, ಅಗತ್ಯವಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಹಾಗೂ ಗುಂಪನ್ನು ಚದುರಿಸುವ ಕ್ರಮ ಕೈಗೊಳ್ಳಬಹುದು.

ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸುವುದರ ಜೊತೆಗೆ ನೀಡಿರುವ ಅನುಮತಿಗಳನ್ನು ರದ್ದುಪಡಿಸುವ ಅಧಿಕಾರವೂ ಸಂಬಂಧಿಸಿದ ಅಧಿಕಾರಿಗಳಿಗೆ ನೀಡಲಾಗಿದೆ.

ಸಾರ್ವಜನಿಕ ಕಾರ್ಯಕ್ರಮ, ಮೆರವಣಿಗೆ ಅಥವಾ ಆಚರಣೆಯಲ್ಲಿ ಹೆಚ್ಚಿನ ಶಬ್ದ ವ್ಯವಸ್ಥೆ ಬಳಸಬೇಕಾದರೆ ಪೂರ್ವ ಲಿಖಿತ ಅನುಮತಿ ಪಡೆಯಬೇಕು. ನಿಗದಿತ ಶಬ್ದಮಿತಿಯೊಳಗಿನ ಸಾಧನಗಳನ್ನಷ್ಟೇ ಬಳಸಬೇಕು. ಶಬ್ದ ಮಾಲಿನ್ಯ ನಿಯಮಗಳನ್ನು ಪಾಲಿಸುವ ಕುರಿತು ಆಯೋಜಕರು ಲಿಖಿತ ಮುಚ್ಚಳಿಕೆ ನೀಡಬೇಕು.

ಆದೇಶ ಉಲ್ಲಂಘನೆಯಾದಲ್ಲಿ ಕಾರ್ಯಕ್ರಮದ ಆಯೋಜಕರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಜನರ ನೆಮ್ಮದಿಗೆ ಧಕ್ಕೆ ಉಂಟಾಗದಂತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

— ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img