ನವದೆಹಲಿ: ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಎದುರಿಸುತ್ತಿದ್ದ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ ಈ ರಿಲೀಫ್ಗೆ ₹5 ಕೋಟಿ ಠೇವಣಿ ಷರತ್ತು ವಿಧಿಸಲಾಗಿದ್ದು, ಬುಧವಾರದೊಳಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಹಣ ಠೇವಣಿ ಮಾಡಬೇಕಾಗಿದೆ. ನಿಗದಿತ ಮೊತ್ತ ಪಾವತಿಸಿದರೆ ಮಾತ್ರ ಜಾಮೀನಿನ ಪ್ರಯೋಜನ ದೊರೆಯಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರ ಪೀಠ, ರಾಜ್ಪಾಲ್ ಯಾದವ್ ಹಾಗೂ ಅವರ ಪತ್ನಿ ರಾಧಾ ಯಾದವ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಪಡೆದ ಸಾಲದ ಹಣವನ್ನು ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ರಾಜ್ಪಾಲ್ ಯಾದವ್ ನೀಡಿದ್ದ ಚೆಕ್ಗಳು ಬೌನ್ಸ್ ಆಗಿದ್ದವು. ಈ ಹಿನ್ನೆಲೆಯಲ್ಲಿ ನಟನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ ಕಾನೂನು ಹೋರಾಟದ ಭಾಗವಾಗಿ ವಿಷಯ ಸುಪ್ರೀಂ ಕೋರ್ಟ್ವರೆಗೆ ತಲುಪಿತ್ತು.
ಈ ಹಿಂದೆ ಹೈಕೋರ್ಟ್ ಏಳು ಪ್ರಕರಣಗಳಲ್ಲಿ ನಟನಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಒಟ್ಟಿಗೆ ಅನುಭವಿಸುವಂತೆ ಆದೇಶಿಸಿತ್ತು. ಪ್ರತಿ ಪ್ರಕರಣದ ದೂರುದಾರರಿಗೆ ತಲಾ ₹1.05 ಕೋಟಿ ಪಾವತಿಸುವಂತೆ ಸೂಚಿಸಲಾಗಿತ್ತು. ಜತೆಗೆ ಪ್ರತಿ ಪ್ರಕರಣದಲ್ಲಿ ₹25,000 ದಂಡವನ್ನು ರಾಜ್ಯ ಸರ್ಕಾರಕ್ಕೆ ಪಾವತಿಸಬೇಕಿತ್ತು. ರಾಧಾ ಯಾದವ್ ಅವರಿಗೆ ಪ್ರತಿ ಪ್ರಕರಣಕ್ಕೂ ₹5.51 ಲಕ್ಷ ಪಾವತಿಸುವಂತೆ ಪ್ರತ್ಯೇಕ ನಿರ್ದೇಶನ ನೀಡಲಾಗಿತ್ತು.
ಈ ನಡುವೆ ರಾಜ್ಪಾಲ್ ಯಾದವ್ ಈಗಾಗಲೇ ದೂರುದಾರರಿಗೆ ₹2.25 ಕೋಟಿ ಪಾವತಿಸಿರುವುದು ವಿಚಾರಣೆ ವೇಳೆ ಗಮನಕ್ಕೆ ಬಂದಿತ್ತು. ಈ ಮೊತ್ತವನ್ನು ಬಾಕಿ ಹಣದಲ್ಲಿ ಹೊಂದಿಸಿಕೊಳ್ಳುವಂತೆ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಟನಿಗೆ ಎರಡು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಅಷ್ಟರ ಅವಧಿಗೆ ಶಿಕ್ಷೆಯನ್ನು ಅಮಾನತಿನಲ್ಲಿಡಲಾಗಿತ್ತು.



