ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮೊಬೈಲ್ ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಎರಡು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 2ನೇ ಎಸಿಜೆಎಂ ನ್ಯಾಯಾಧೀಶರಾದ ಸಂದೀಪ್ ಪಾಟೀಲ್ ಅವರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದ್ದಾರೆ.
ಪೊಲೀಸರ ವಿಚಾರಣೆಗೆ ಪ್ರಜ್ವಲ್ ರೇವಣ್ಣ ಆಕ್ಷೇಪ?
ಪರಪ್ಪನ ಅಗ್ರಹಾರ ಪೊಲೀಸರ ವಿಚಾರಣೆ ವೇಳೆ ಪ್ರಜ್ವಲ್ ರೇವಣ್ಣ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ‘ಯಾರ ಜೊತೆಗೆ ಮಾತನಾಡುತ್ತಿದ್ದೀರಾ ನೀವು? ನಾನು ಮಾಜಿ ಸಂಸದ, ಮಾಜಿ ಪ್ರಧಾನಿ ಮೊಮ್ಮಗ. ಬೇಕಂತಲೇ ನನ್ನನ್ನು ಸಿಕ್ಕಿಸಲು ಯತ್ನಿಸುತ್ತಿದ್ದೀರಿ. ನನ್ನ ಜಾಮೀನು ರದ್ದುಗೊಳಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೀರಿ’ ಎಂದು ಅವರು ಪೊಲೀಸರ ಮುಂದೆ ಹೇಳಿರುವುದಾಗಿ ವರದಿಯಾಗಿದೆ.
‘ನಾನು ಏನೂ ಹೇಳಲ್ಲ, ಏನೂ ಮಾತಾಡಲ್ಲ. ನೀವು ಏನ್ ಬೇಕಾದ್ರೂ ಮಾಡ್ಕೊಳಿ’ ಎಂದು ಪೊಲೀಸರಿಗೆ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಹಾಗೂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಜೈಲಿನಲ್ಲಿ ಮೊಬೈಲ್ ಪತ್ತೆಯಾಗಿದ್ದು ಹೇಗೆ?
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ನಿಗ್ರಹ ಪಡೆ ರಚಿಸಿರುವ ಹಿನ್ನೆಲೆಯಲ್ಲಿ, ಜೈಲಿನಲ್ಲಿರುವ ರೌಡಿಗಳು ಹೊರಗಿರುವ ರೌಡಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಜೈಲಿನೊಳಗೆ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ್ದರು.
ಈ ವೇಳೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಇದರಿಂದ ಜೈಲಿನೊಳಗೆ ಮೊಬೈಲ್ ಹೇಗೆ ಬಂತು, ಯಾರು ಅದನ್ನು ಬಳಸುತ್ತಿದ್ದರು ಹಾಗೂ ಮೊಬೈಲ್ ಮೂಲಕ ಯಾರೊಂದಿಗೆ ಸಂಪರ್ಕ ಹೊಂದಲಾಗಿತ್ತು ಎಂಬ ಹಲವು ಪ್ರಶ್ನೆಗಳು ತನಿಖೆಯ ವ್ಯಾಪ್ತಿಗೆ ಬಂದಿವೆ.
ಪ್ರಕರಣದ ತನಿಖೆಗಾಗಿ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ಗೆ ಮೊಬೈಲ್ ಹೇಗೆ ಪ್ರವೇಶಿಸಿತು ಎಂಬುದರ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚಿಸಿದ್ದರು.
ಇದೀಗ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರಾಯ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಜೈಲಿನೊಳಗೆ ಮೊಬೈಲ್ ಬಳಕೆಯಾದ ಪ್ರಕರಣದ ತನಿಖೆ ಮುಂದುವರಿದಿದೆ.



