ಹಾಸನ: ನೇಪಾಳದಲ್ಲಿ ಸಂಭವಿಸಿದ ರೀತಿಯ ಭೀಕರ ಪ್ರವಾಹದಂತಹ ಘಟನೆಗಳು ದಕ್ಷಿಣ ಭಾರತದಲ್ಲೂ ಸಂಭವಿಸುವ ಸಾಧ್ಯತೆಯಿದೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಸಮುದ್ರದ ನೀರು ನುಗ್ಗಿ ಊರುಗಳು ಮುಳುಗುವಂತಹ ಘಟನೆಗಳು ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿರುವ ಅವರು, ಪ್ರಕೃತಿ ವಿಕೋಪಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.
ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿಶ್ರೀ, ಈ ವರ್ಷದ ಮುಂಗಾರು ಮಳೆ ವಿರಳವಾಗಲಿದೆ ಹಾಗೂ ಹಿಂಗಾರು ಮಳೆ ಉತ್ತಮವಾಗಲಿದೆ ಎಂದು ತಾವು ಈ ಹಿಂದೆಯೇ ಹೇಳಿದ್ದಾಗಿ ತಿಳಿಸಿದ್ದಾರೆ. ಜನಜಂಗುಳಿ ಹೆಚ್ಚಾಗುವುದು, ಅನ್ನ, ಆಹಾರ ಮತ್ತು ನೀರಿನ ಕೊರತೆ ಎದುರಾಗುವುದು, ಸಾವು-ನೋವುಗಳು ಹೆಚ್ಚಾಗುವುದು ಹಾಗೂ ವಿಪರೀತ ಪ್ರವಾಹ ಸಂಭವಿಸುವ ಬಗ್ಗೆ ತಾವು ಭವಿಷ್ಯ ನುಡಿದಿದ್ದಾಗಿ ಹೇಳಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಹಿಂಗಾರು ಮಳೆ ಸಮೃದ್ಧಿಯಾಗಲಿದೆ ಎಂದು ಕೋಡಿಶ್ರೀ ಹೇಳಿದ್ದಾರೆ. ಹಿಂಗಾರು ಮಳೆ ಉತ್ತಮವಾಗಿ ಸುರಿದು ಕೆರೆ-ಕಟ್ಟೆಗಳು ತುಂಬಲಿವೆ. ಇದರಿಂದ ಹೆಚ್ಚಿನ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಹಿಂಗಾರು ಮಳೆಯಿಂದ ಶೇ.90ರಷ್ಟು ಜನರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ರೈತರಿಗೆ ಆಶಾದಾಯಕ ಮಾತುಗಳನ್ನು ಹೇಳಿದ್ದಾರೆ. ಇದೇ ವೇಳೆ ನೇಪಾಳದಲ್ಲಿ ನಡೆದಿರುವ ಘಟನೆಗಳ ರೀತಿಯಲ್ಲೇ ದಕ್ಷಿಣ ಭಾರತದಲ್ಲೂ ಸಾವು-ನೋವು, ದುಃಖ ಹಾಗೂ ಊರುಗಳು ಕೊಚ್ಚಿಹೋಗುವಂತಹ ಘಟನೆಗಳು ಸಂಭವಿಸುವ ಲಕ್ಷಣಗಳಿವೆ ಎಂದು ಕೋಡಿಶ್ರೀ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ತಾವು ದೇಶ ಹಾಗೂ ವಿಶ್ವದಲ್ಲಿ ಸಂಭವಿಸಬಹುದಾದ ಹಲವು ಬೆಳವಣಿಗೆಗಳ ಬಗ್ಗೆ ಹೇಳುತ್ತಲೇ ಬಂದಿರುವುದಾಗಿ ಅವರು ತಿಳಿಸಿದ್ದಾರೆ. ದೇಶಗಳು ಮುಳುಗುವಂತಹ ಪರಿಸ್ಥಿತಿ, ವಿಪರೀತ ನೀರು, ಜನಜಂಗುಳಿ ಹಾಗೂ ಯುದ್ಧದಂತಹ ಬೆಳವಣಿಗೆಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆಯೂ ತಾವು ಈ ಹಿಂದೆ ಹೇಳಿದ್ದಾಗಿ ಕೋಡಿಶ್ರೀ ಹೇಳಿದ್ದಾರೆ.
ಪ್ರಕೃತಿಗೆ ವಿರುದ್ಧವಾಗಿ ನಡೆಯುತ್ತಿರುವ ಚಟುವಟಿಕೆಗಳಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಜಗತ್ತಿನಾದ್ಯಂತ ದೊಡ್ಡ ಪ್ರಮಾಣದಲ್ಲಿ ಬೋರ್ವೆಲ್ಗಳನ್ನು ಕೊರೆಯಲಾಗಿದ್ದು, ಇದರಿಂದ ಭೂಮಿಯ ಮೇಲ್ಮೈ ಮತ್ತು ಅಂತರ್ಜಲ ವ್ಯವಸ್ಥೆಯ ಮೇಲೆ ಪರಿಣಾಮ ಉಂಟಾಗಿದೆ. ಪರಿಣಾಮವಾಗಿ ಪ್ರವಾಹ ಹಾಗೂ ಭೂಮಿ ಕಂಪನದಂತಹ ಘಟನೆಗಳು ಹೆಚ್ಚಾಗುತ್ತಿವೆ ಎಂಬ ಅಭಿಪ್ರಾಯವನ್ನೂ ಕೋಡಿಶ್ರೀ ವ್ಯಕ್ತಪಡಿಸಿದ್ದಾರೆ.



