HomeKarnataka Newsಸರ್ಕಾರಿ ಜಮೀನು ಮಾರಾಟಕ್ಕೆ ಖಾಸಗಿಯವರಿಗೆ ಅಧಿಕಾರವಿಲ್ಲ: 33 ಎಕರೆ 33 ಗುಂಟೆ ಜಾಗ ಸರ್ಕಾರದ ವಶಕ್ಕೆ...

ಸರ್ಕಾರಿ ಜಮೀನು ಮಾರಾಟಕ್ಕೆ ಖಾಸಗಿಯವರಿಗೆ ಅಧಿಕಾರವಿಲ್ಲ: 33 ಎಕರೆ 33 ಗುಂಟೆ ಜಾಗ ಸರ್ಕಾರದ ವಶಕ್ಕೆ ಪಡೆಯಲು ಹೈಕೋರ್ಟ್ ಆದೇಶ

For Dai;y Updates Join Our whatsapp Group

ಬೆಂಗಳೂರು: ಸರ್ಕಾರಿ ಜಮೀನನ್ನು ಯಾವುದೇ ಖಾಸಗಿ ವ್ಯಕ್ತಿ ಮತ್ತೊಬ್ಬರಿಗೆ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಯಲಹಂಕ ತಾಲೂಕಿನ ನೆಲ್ಲುಕುಂಟೆ ಗ್ರಾಮದಲ್ಲಿ ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್ ಹೊಂದಿದೆ ಎನ್ನಲಾದ 33 ಎಕರೆ 33 ಗುಂಟೆ ‘ಬಿ ಖರಾಬು’ ಸರ್ಕಾರಿ ಜಮೀನನ್ನು ಸರ್ವೆ ನಡೆಸಿ, ಗಡಿ ಗುರುತಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ನ್ಯಾಯಪೀಠ ಸೂಚಿಸಿದೆ.

ಸರ್ಕಾರಿ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಪರವಾಗಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಹೆಚ್. ಶಾಂತಿ ಭೂಷಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಯಾವುದೇ ಖಾಸಗಿ ವ್ಯಕ್ತಿಗೆ ಸರ್ಕಾರಿ ‘ಬಿ ಖರಾಬು’ ಜಮೀನನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ಅಥವಾ ವರ್ಗಾವಣೆ ಮಾಡಲು ಅವಕಾಶವಿಲ್ಲ. ಇಂತಹ ಜಮೀನಿನ ಮಾರಾಟ ಪತ್ರಗಳು ಕಾನೂನುಬದ್ಧವಾಗಿ ಅಸಿಂಧುವಾಗುತ್ತವೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

101 ಎಕರೆ ಹಕ್ಕು, 133 ಎಕರೆ ಮಾರಾಟ

ಟ್ರಸ್ಟ್ ಪರವಾಗಿ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿದ್ದ ಅರ್ಜಿಯಲ್ಲಿ, ಸರಸ್ವತಮ್ಮ ಎಂಬುವರಿಂದ ಜಮೀನು ಖರೀದಿಸಿರುವುದಾಗಿ ಹೇಳಲಾಗಿತ್ತು. ಆದರೆ ಸರಸ್ವತಮ್ಮ ಅವರಿಗೆ ಕೇವಲ 101 ಎಕರೆ 37 ಗುಂಟೆ ಜಮೀನಿನ ಮೇಲಷ್ಟೇ ಹಕ್ಕು ಇತ್ತು. ಇದಕ್ಕಿಂತ ಹೆಚ್ಚಿನ ಜಮೀನನ್ನು ಅವರು ಟ್ರಸ್ಟ್‌ಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಹೆಚ್ಚುವರಿ ಜಮೀನಿನ ಮೇಲೆ ಟ್ರಸ್ಟ್ ಮಾಲೀಕತ್ವ ಹೊಂದಲು ಸಾಧ್ಯವಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.

ಮುಂದಿನ ಮೂರು ತಿಂಗಳೊಳಗೆ ಸಂಬಂಧಪಟ್ಟ ಎಲ್ಲ ಪಕ್ಷಗಾರರಿಗೆ ನೋಟಿಸ್ ಜಾರಿ ಮಾಡಬೇಕು. ವಿವಾದಿತ ಜಮೀನಿನ ಜಂಟಿ ಸರ್ವೆ ನಡೆಸಿ ಸ್ಕೆಚ್ ಸಿದ್ಧಪಡಿಸಬೇಕು ಎಂದು ನ್ಯಾಯಪೀಠ ಸೂಚಿಸಿದೆ.

ಸರ್ವೆಯಲ್ಲಿ ಗುರುತಿಸಲಾಗುವ 33 ಎಕರೆ 33 ಗುಂಟೆ ಜಮೀನನ್ನು ಕಂದಾಯ ದಾಖಲೆಗಳಲ್ಲಿ ‘ಬಿ ಖರಾಬು ಸರ್ಕಾರಿ ಜಮೀನು’ ಎಂದು ದಾಖಲಿಸಬೇಕು. ಈ ಜಾಗವನ್ನು ಉದ್ಯಾನವನ, ಸ್ಮಶಾನ, ರಸ್ತೆ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು ಎಂದು ಪೀಠ ತಿಳಿಸಿದೆ.

ಇದಲ್ಲದೆ, ವಿವಾದಿತ ಸರ್ಕಾರಿ ಜಮೀನನ್ನು ಯಾವುದೇ ಬಿಲ್ಡರ್‌ಗಳು, ಡೆವಲಪರ್‌ಗಳು ಅಥವಾ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆಗಳಿಗಾಗಿ ನೀಡಬಾರದು ಎಂದು ಸರ್ಕಾರದಿಂದ ಪ್ರಮಾಣಪತ್ರ ಪಡೆದುಕೊಳ್ಳಬೇಕು ಎಂಬ ಅಂಶವನ್ನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ ಏನು?

ಮೂಲ ಜಮೀನುದಾರರಾದ ಕೃಷ್ಣರಾವ್ ಎಲ್. ಬಾಳೇಕಾಯಿ ಅವರು 1961ರಲ್ಲಿ ತಮ್ಮ ಪತ್ನಿ ಸರಸ್ವತಮ್ಮ ಅವರಿಗೆ ಸೆಟಲ್ಮೆಂಟ್ ಡೀಡ್ ಮೂಲಕ 101 ಎಕರೆ 37 ಗುಂಟೆ ಜಮೀನನ್ನು ನೀಡಿದ್ದರು.

ಆದರೆ ಸರಸ್ವತಮ್ಮ ಅವರು ತಮಗಿದ್ದ ಹಕ್ಕಿಗಿಂತ ಹೆಚ್ಚಿನ ಪ್ರಮಾಣದ, ಒಟ್ಟು 133 ಎಕರೆ 33 ಗುಂಟೆ ಜಮೀನನ್ನು ಕೃಷ್ಣದೇವರಾಯ ಎಜುಕೇಷನಲ್ ಟ್ರಸ್ಟ್‌ಗೆ ಆರು ಪ್ರತ್ಯೇಕ ಕ್ರಯ ಪತ್ರಗಳ ಮೂಲಕ ಮಾರಾಟ ಮಾಡಿದ್ದರು. ಇದರಲ್ಲಿ 31 ಎಕರೆ 36 ಗುಂಟೆ ಖರಾಬು ಜಮೀನು ಕೂಡ ಸೇರಿತ್ತು ಎನ್ನಲಾಗಿದೆ.

ಮೂಲ ಮಾರಾಟಗಾರರಿಗೇ ಹಕ್ಕಿಲ್ಲದ ಜಮೀನನ್ನು ಟ್ರಸ್ಟ್ ಖರೀದಿಸಿ ಬಳಸಿಕೊಳ್ಳುತ್ತಿದೆ ಎಂದು ಪ್ರಶ್ನಿಸಿ ಭೂಮಾಪನ ಇಲಾಖೆ ಸರ್ವೆ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್ ಪ್ರಶ್ನಿಸಿ ಟ್ರಸ್ಟ್ ಹೈಕೋರ್ಟ್ ಮೊರೆ ಹೋಗಿತ್ತು. ಈ ಹಿಂದೆ ಏಕಸದಸ್ಯ ಪೀಠವು ನೋಟಿಸ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.

ಇದೀಗ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸರ್ಕಾರಿ ‘ಬಿ ಖರಾಬು’ ಜಮೀನಿನ ಮಾರಾಟ ಅಥವಾ ವರ್ಗಾವಣೆ ಕಾನೂನುಬದ್ಧವಲ್ಲ ಎಂದು ಸ್ಪಷ್ಟಪಡಿಸಿ, ಜಮೀನನ್ನು ಸರ್ವೆ ನಡೆಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಆದೇಶಿಸಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img