ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಿಸಿಎನ್ ಸ್ಪೆಕ್ಟ್ರಂ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಗ್ರೂಪ್ ಮಟ್ಟದ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎರಡನೇ ಬಾರಿಗೆ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದಾರೆ.
ಸೆ. 10ರಂದು ನಡೆದ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದರು. ಶಶಿಧರ ನಂದೆಣ್ಣವರ 100 ಮೀ. ಓಟ, 80 ಮೀ. ಹರ್ಡಲ್ಸ್ ಹಾಗೂ ಉದ್ದ ಜಿಗಿತದಲ್ಲಿ, ವರ್ಷಿತಾ ವಾಲ್ಮೀಕಿ ಎತ್ತರ ಜಿಗಿತ, 80 ಮೀ. ಹರ್ಡಲ್ಸ್ ಹಾಗೂ 200 ಮೀ. ಓಟದಲ್ಲಿ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದರು.
ಪವಿತ್ರ ಓಂಕಾರಿ 400 ಮೀ. ಓಟ ಹಾಗೂ ಎತ್ತರ ಜಿಗಿತ, ಫಿಜಾ ಕೌಸರ್ ಕಣವಿ 400 ಮೀ. ಓಟ, ಮಣಿಕಂಠ ಬನ್ನಿ ಚಕ್ರ ಎಸೆತ ಹಾಗೂ ಸೈಯದ್ ಮುಸ್ತಾಕೀನ್ 100 ಮೀ. ಓಟದಲ್ಲಿ ಉತ್ತಮ ಪ್ರದರ್ಶನ ನೀಡಿದರು.
ಬಾಲಕರ ವಾಲಿಬಾಲ್, ಥ್ರೋಬಾಲ್, ಬಾಲಕಿಯರ ಕಬಡ್ಡಿ ಹಾಗೂ ರಿಲೇ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 91 ಅಂಕ ಗಳಿಸಿದ ಶಾಲಾ ತಂಡ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ. ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ದೈಹಿಕ ಆರೋಗ್ಯ, ಶಿಸ್ತು ಹಾಗೂ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ನಿರಂತರ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ನಿರ್ದೇಶಕ ಲೋಹಿತ ನೆಲವಗಿ ತಿಳಿಸಿದ್ದಾರೆ.



