ತುಮಕೂರು: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ನವದಂಪತಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾಳು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಮೃತರನ್ನು ಶಿರಾ ತಾಲೂಕಿನ ಹುಣಸೇಕಟ್ಟೆ ಗ್ರಾಮದ ದರ್ಶನ್ (25) ಹಾಗೂ ಉಷಾರಾಣಿ (21) ಎಂದು ಗುರುತಿಸಲಾಗಿದೆ. ದಂಪತಿ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.
ಮಂಗಳವಾರ ಬೈಕ್ನಲ್ಲಿ ಬೆಂಗಳೂರಿನತ್ತ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಉಷಾರಾಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಚಾಲಕನ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



