HomeKarnataka NewsUPI ವಹಿವಾಟಿಗೂ ತೆರಿಗೆ ವಿಧಿಸಲು ಕಾಂಗ್ರೆಸ್ ವಿರೋಧ: ‘ಇದು ದೇಶದ ಜನರಿಗೆ ಮಾಡಿದ ಮೋಸ’ -...

UPI ವಹಿವಾಟಿಗೂ ತೆರಿಗೆ ವಿಧಿಸಲು ಕಾಂಗ್ರೆಸ್ ವಿರೋಧ: ‘ಇದು ದೇಶದ ಜನರಿಗೆ ಮಾಡಿದ ಮೋಸ’ – ಸುರ್ಜೇವಾಲಾ ಕಿಡಿ!

For Dai;y Updates Join Our whatsapp Group

ಬೆಂಗಳೂರು: ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕೇಂದ್ರದ ನಿರ್ಧಾರವನ್ನು ಖಂಡಿಸಿ ಕಾಂಗ್ರೆಸ್ ನಾಯಕ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಈ ಕ್ರಮ ದೇಶದ ಜನರಿಗೆ ಮಾಡಿದ ಮೋಸ ಎಂದು ಆರೋಪಿಸಿದ್ದಾರೆ.

ಬಡವರು, ಮಧ್ಯಮ ವರ್ಗ ಸೇರಿದಂತೆ ಎಲ್ಲರ ಮೇಲೂ ಇದರ ಪರಿಣಾಮ ಬೀರಲಿದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಅಮೆರಿಕದ ಕಂಪನಿಗಳಿಗೆ ಶರಣಾಗಿದೆ ಎಂದು ಆರೋಪಿಸಿದ ಅವರು, ಯುಪಿಐ ವಹಿವಾಟಿನ ಮೇಲಿನ ಶುಲ್ಕದಿಂದ ಜನರಿಗೆ ಹೊರೆಯಾಗಲಿದೆ ಎಂದಿದ್ದಾರೆ.

ಇತ್ತೀಚಿನ ನಿಯಮದ ಪ್ರಕಾರ, ₹2,000ಕ್ಕಿಂತ ಹೆಚ್ಚಿನ ಮೊತ್ತದ ವ್ಯಕ್ತಿಯಿಂದ-ವ್ಯಾಪಾರಿಗೆ (P2M) ಯುಪಿಐ ವಹಿವಾಟುಗಳಿಗೆ ಅಕ್ಟೋಬರ್ 15ರಿಂದ ಶೇ.0.4ರಷ್ಟು ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅನ್ವಯವಾಗಲಿದೆ. ₹75,000 ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿಗೆ ಪ್ರತಿ ವಹಿವಾಟಿಗೆ ಗರಿಷ್ಠ ₹300 ಮಿತಿ ಇದೆ. ಆದರೆ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯುಪಿಐ ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. ಸರ್ಕಾರದ ಸ್ಪಷ್ಟನೆಯ ಪ್ರಕಾರ, ಈ MDR ಅನ್ನು ಗ್ರಾಹಕರಿಂದ ವಸೂಲಿ ಮಾಡಬಾರದು.

ಈ ಶುಲ್ಕ ವ್ಯವಸ್ಥೆಯನ್ನು ಟೀಕಿಸಿರುವ ಸುರ್ಜೇವಾಲ, ಯುಪಿಐ ಅನ್ನು ಮೋದಿ ಸರ್ಕಾರ ‘ಕಲೆಕ್ಷನ್ ಮಷಿನ್’ ಆಗಿ ಪರಿವರ್ತಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮುಂದಿನ ದಿನಗಳಲ್ಲಿ ವಹಿವಾಟು ಶುಲ್ಕವನ್ನು ಎಲ್ಲರಿಗೂ ವಿಸ್ತರಿಸುವ ಆತಂಕವಿದೆ ಎಂದು ಅವರು ಹೇಳಿದ್ದಾರೆ.

ಇನ್ನು ರಾಜ್ಯ ಸರ್ಕಾರ ವಂದೇ ಮಾತರಂ ಗೀತೆಯ ಮೊದಲ ಎರಡು ಚರಣಗಳನ್ನು ಹಾಡುವಂತೆ ನೀಡಿರುವ ಆದೇಶದ ಬಗ್ಗೆಯೂ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ. ಕೇಂದ್ರದ ಮಾರ್ಗಸೂಚಿಗಳಿಗೆ ಬದ್ಧವಾಗಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರ ವಂದೇ ಮಾತರಂಗೆ ಗೌರವ ನೀಡುವ ಕೆಲಸ ಮಾಡಿದೆ. ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ಪ್ರಧಾನಮಂತ್ರಿ ಆಗಮಿಸುವ ಸಂದರ್ಭದಲ್ಲಿ ಪೂರ್ಣ ಗೀತೆಯನ್ನು ಹಾಡಲಾಗುತ್ತದೆ. ವಂದೇ ಮಾತರಂ ಹಾಡುವುದಿಲ್ಲ ಎಂದು ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ವೇಳೆ ಸತೀಶ್ ಜಾರಕಿಹೊಳಿ ಸೇರಿದಂತೆ ಕಾಂಗ್ರೆಸ್ ನಾಯಕರ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳ ದಾಳಿ ನಡೆಯುತ್ತಿರುವ ವಿಚಾರವಾಗಿ ಸುರ್ಜೇವಾಲ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಎಸ್‌ಟಿ ಸಮುದಾಯದ ನಾಯಕ ಎಂಬ ಕಾರಣಕ್ಕೆ ಅವರನ್ನು ಎರಡು ಬಾರಿ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಡಿಕೆ ಸಹೋದರರು, ಸಿದ್ದರಾಮಯ್ಯ, ಭೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್, ಕೆ.ವಿ. ವೀರೇಂದ್ರ ಪಪ್ಪಿ, ಡಾ. ಜಿ. ಪರಮೇಶ್ವರ್, ನಾರಾ ಭರತ್ ರೆಡ್ಡಿ, ನಾಗೇಂದ್ರ ಹಾಗೂ ದದ್ದಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿ ನಡೆದಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಎಲ್ಲ ದಾಳಿಗಳಿಗೆ ಪ್ರಮುಖ ಕಾರಣ ಕಾಂಗ್ರೆಸ್‌ನಲ್ಲಿರುವ ಎಸ್‌ಸಿ, ಎಸ್‌ಟಿ ಸಮುದಾಯದ ನಾಯಕರು ಎಂಬುದು ಎಂದು ಸುರ್ಜೇವಾಲ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರದ ಮುಂದೆ ಕಾಂಗ್ರೆಸ್ ನಾಯಕರು ತಲೆಬಾಗುವುದಿಲ್ಲ. ನಾವೆಲ್ಲರೂ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಇದ್ದೇವೆ ಎಂದು ಅವರು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಜನಾರ್ದನ ರೆಡ್ಡಿ ಹಾಗೂ ರೇಣುಕಾಚಾರ್ಯ ಅವರ ವಿರುದ್ಧದ ಪ್ರಕರಣಗಳ ಕುರಿತು ಪ್ರಶ್ನಿಸಿದ ಸುರ್ಜೇವಾಲ, ಅವರ ಮೇಲಿನ ಪ್ರಾಸಿಕ್ಯೂಷನ್ ವಿಚಾರಗಳು ಬಾಕಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img