HomeKarnataka Newsಪ್ರದೋಷ್ʼಗೆ ಮತ್ತೊಂದು ಸಂಕಷ್ಟ? ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ ಉಲ್ಲೇಖಿಸಿ ‘ಮಾಫಿ ಸಾಕ್ಷಿ ಮಾಡಬೇಡಿ’ ಎಂದ...

ಪ್ರದೋಷ್ʼಗೆ ಮತ್ತೊಂದು ಸಂಕಷ್ಟ? ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ ಉಲ್ಲೇಖಿಸಿ ‘ಮಾಫಿ ಸಾಕ್ಷಿ ಮಾಡಬೇಡಿ’ ಎಂದ ದರ್ಶನ್!

For Dai;y Updates Join Our whatsapp Group

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಗೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯುವಂತೆ ಕೋರಿ ನಟ ದರ್ಶನ್ ಪರ ವಕೀಲರು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಇಂದು ಅರ್ಜಿಯ ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಪ್ರದೋಷ್ ಪರ ವಕೀಲರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರ ನಡುವೆ ತೀವ್ರ ವಾದ-ಪ್ರತಿವಾದ ನಡೆಯಿತು.

ದರ್ಶನ್ ಪರ ವಕೀಲರು, ಪ್ರದೋಷ್ ಜೈಲಿನಲ್ಲಿದ್ದ ವೇಳೆ ಅಕ್ರಮವಾಗಿ ಮೊಬೈಲ್ ಫೋನ್ ಬಳಕೆ ಮಾಡಿದ್ದಾನೆ ಎಂದು ಆರೋಪಿಸಿದರು. ಬೇರೊಬ್ಬರ ಹೆಸರಿನಲ್ಲಿ ನಂಬರ್ ನೋಂದಾಯಿಸಿ ತನ್ನ ಪತ್ನಿಗೆ ಕರೆ ಮಾಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಕೋರ್ಟ್‌ಗೆ ತಿಳಿಸಿದರು.

ಜೈಲಾಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲೂ ಅಕ್ರಮ ಕರೆ ಮಾಡಿರುವುದು ದೃಢಪಟ್ಟಿದೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಜೈಲಿನಿಂದ ಹೊರಬರಲು ಪ್ರದೋಷ್ ಹಲವರೊಂದಿಗೆ ಸಂಪರ್ಕ ಸಾಧಿಸಿದ್ದಾನೆ ಎನ್ನಲಾಗಿದ್ದು, ಆತನ ಮೇಲೆ ಯಾರಾದರೂ ಒತ್ತಡ ಹೇರಿರುವ ಸಾಧ್ಯತೆಯೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಈ ಪ್ರಕರಣದ ಸಂಪೂರ್ಣ ತನಿಖೆ ಮುಗಿಯುವವರೆಗೆ ಪ್ರದೋಷ್‌ನನ್ನು ಮಾಫಿ ಸಾಕ್ಷಿ ಎಂದು ಪರಿಗಣಿಸಬಾರದು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಬೇಕು ಹಾಗೂ ಜೈಲಿನಲ್ಲಿನ ಅಕ್ರಮದ ತನಿಖೆ ಪೂರ್ಣಗೊಂಡ ಬಳಿಕವೇ ಮಾಫಿ ಸಾಕ್ಷಿ ವಿಚಾರದಲ್ಲಿ ಆದೇಶ ಹೊರಡಿಸಬೇಕು ಎಂದು ದರ್ಶನ್ ಪರ ವಕೀಲರು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ವಿಶೇಷ ಸರ್ಕಾರಿ ಅಭಿಯೋಜಕರು, ಜೈಲಿನಲ್ಲಿ ನಡೆದಿದೆ ಎನ್ನಲಾದ ಘಟನೆ ಹಾಗೂ ಪ್ರದೋಷ್ ಮಾಫಿ ಸಾಕ್ಷಿಯಾಗುವ ವಿಚಾರ ಎರಡು ಪ್ರತ್ಯೇಕ ವಿಷಯಗಳು ಎಂದು ವಾದಿಸಿದರು. ಜೈಲು ಮ್ಯಾನುಯಲ್ ಪ್ರಕಾರ ಖೈದಿಗಳಿಗೆ ಮೂರು ಫೋನ್ ನಂಬರ್‌ಗಳಿಗೆ ಕರೆ ಮಾಡಲು ಅವಕಾಶವಿದೆ. ಆದರೆ ಪ್ರದೋಷ್ ತನ್ನ ಮಿತಿಯನ್ನು ಮೀರಿ ಮತ್ತೊಬ್ಬರ ಹೆಸರಿನಲ್ಲಿ ಪತ್ನಿಯ ನಂಬರ್ ನೋಂದಾಯಿಸಿಕೊಂಡು ಮಾತನಾಡಿದ್ದಾನೆ ಎನ್ನುವುದು ಆರೋಪವಾಗಿದೆ ಎಂದು ತಿಳಿಸಿದರು.

ಹೈಕೋರ್ಟ್ ಈಗಾಗಲೇ ಒಂದು ವಾರದೊಳಗೆ ಆದೇಶ ನೀಡುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮತ್ತಷ್ಟು ಕಾಲಾವಕಾಶ ನೀಡುವ ಅಗತ್ಯವಿಲ್ಲ. ದರ್ಶನ್ ಪರ ಸಲ್ಲಿಸಿರುವ ಮೆಮೋಗೆ ಕಾನೂನು ಮಾನ್ಯತೆ ಇಲ್ಲ ಹಾಗೂ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ಸರ್ಕಾರಿ ಅಭಿಯೋಜಕರು ವಾದಿಸಿದರು.

ಪ್ರದೋಷ್ ವಿರುದ್ಧದ ಜೈಲು ಅಕ್ರಮದ ಆರೋಪಕ್ಕೂ ಆತ ಮಾಫಿ ಸಾಕ್ಷಿಯಾಗುವುದಕ್ಕೂ ನೇರ ಸಂಬಂಧವಿಲ್ಲ ಎಂದು ವಾದಿಸಿದ ಸರ್ಕಾರಿ ಅಭಿಯೋಜಕರು, ವಿನಯ್ ಕುಲಕರ್ಣಿ ಪ್ರಕರಣದಲ್ಲೂ ಹಳೆಯ ಪ್ರಕರಣಗಳಿದ್ದರೂ ಬಸವರಾಜ್ ಮುತ್ತಗಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲಾಗಿತ್ತು ಎಂದು ಉದಾಹರಣೆ ನೀಡಿದರು. ಹೈಕೋರ್ಟ್ ಆದೇಶದಂತೆ ನ್ಯಾಯಾಲಯ ಮುಂದುವರಿಯಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದ ಆರೋಪಿ ಪ್ರದೋಷ್ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾನೆ. “ಜೈಲು ಅಧಿಕಾರಿಗಳೇ ನನಗೆ ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು. ನನಗೆ ಯಾವುದೇ ಸಿಸ್ಟಮ್ ಆಕ್ಸೆಸ್ ಇಲ್ಲ. ಮೊದಲು ಲೀಗಲ್ ಎಂದಿದ್ದ ಅಧಿಕಾರಿಗಳೇ ಈಗ ಇಲ್ಲೀಗಲ್ ಎನ್ನುತ್ತಿದ್ದಾರೆ” ಎಂದು ತನ್ನ ಅಳಲು ತೋಡಿಕೊಂಡಿದ್ದಾನೆ.

ಕಳೆದ ಎರಡು-ಮೂರು ದಿನಗಳಿಂದ ತನ್ನನ್ನು ಗುರಿಯಾಗಿಸಿ ಕ್ಯಾಂಟೀನ್ ವ್ಯವಸ್ಥೆ ತೆಗೆದುಹಾಕಲಾಗಿದೆ. ಒಂದು ತಿಂಗಳು ಸೆಲ್‌ನಲ್ಲಿ ಇರಬೇಕು ಹಾಗೂ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬೆದರಿಸಲಾಗುತ್ತಿದೆ ಎಂದು ಪ್ರದೋಷ್ ನ್ಯಾಯಾಧೀಶರ ಮುಂದೆ ಹೇಳಿಕೊಂಡಿದ್ದಾನೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆ ಹಾಗೂ ಜೈಲಿನಲ್ಲಿನ ಅಕ್ರಮ ಮೊಬೈಲ್ ಬಳಕೆ ಆರೋಪದ ವಿಚಾರಗಳು ಇದೀಗ ನ್ಯಾಯಾಲಯದ ಮುಂದಿನ ವಿಚಾರಣೆಯಲ್ಲಿ ಮಹತ್ವ ಪಡೆದುಕೊಂಡಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img