ಬೆಳಗಾವಿ: ಆಸ್ತಿ ದಾಖಲೆ ಪಡೆಯಲು ಗ್ರಾಮ ಪಂಚಾಯಿತಿಗೆ ಬಂದಿದ್ದ ತಂದೆ-ಮಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.
ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾದವರು. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರುದ್ರಪ್ಪ ಹಾಗೂ ಅವರ ಸಹೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಹಲವು ದಿನಗಳಿಂದ ವಿವಾದವಿತ್ತು ಎನ್ನಲಾಗಿದೆ. 38 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂವರು ಸಹೋದರರ ನಡುವೆ ವ್ಯಾಜ್ಯ ನಡೆದಿದ್ದು, ಆಸ್ತಿಯನ್ನು ಮೂವರಿಗೆ ಹಂಚಿಕೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು ಎನ್ನಲಾಗಿದೆ.
ಈ ನಡುವೆ ರುದ್ರಪ್ಪ ಅವರಿಗೆ ಬಂದಿದ್ದ ಜಮೀನನ್ನು ಅವರು ಈಗಾಗಲೇ ಮಾರಾಟ ಮಾಡಿದ್ದರು ಎನ್ನಲಾಗಿದ್ದು, ಉಳಿದ ಜಮೀನಿನಲ್ಲೂ ತಮಗೆ ಪಾಲು ಬೇಕೆಂದು ಅವರು ಒತ್ತಾಯಿಸಿದ್ದರು ಎನ್ನಲಾಗಿದೆ. ರುದ್ರಪ್ಪ ಅವರ ಹೆಸರಿನಲ್ಲಿ ಆಸ್ತಿ ಇರುವುದು ಕೂಡ ಕುಟುಂಬದೊಳಗಿನ ಜಗಳಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿದೆ.
ಇಂದು ಜಮೀನಿನ ದಾಖಲೆ ಮಾಡಿಸಲು ರುದ್ರಪ್ಪ ಗ್ರಾಮ ಪಂಚಾಯಿತಿಗೆ ಬಂದಿದ್ದರು. ಅವರು ಧಾರವಾಡದಿಂದ ಬಾಡಿಗೆ ಕಾರಿನಲ್ಲಿ ಗ್ರಾಮಕ್ಕೆ ಬಂದಿರುವ ವಿಚಾರ ತಿಳಿದ ಬಳಿಕ, ಅವರ ಸಹೋದರರಾದ ಬಸಪ್ಪ ಕುಂದರಗಿ, ಸಂಗಪ್ಪ ಕುಂದರಗಿ ಹಾಗೂ ಸಂಗಪ್ಪ ಅವರ ಪುತ್ರ ಮಡಿವಾಳಪ್ಪ ಕುಂದರಗಿ ಸೇರಿ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಗ್ರಾಮ ಪಂಚಾಯಿತಿ ಆವರಣದಲ್ಲೇ ರುದ್ರಪ್ಪ ಅವರ ಮೇಲೆ ಕೊಡಲಿ, ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ವೇಳೆ ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದಾಳಿ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ತಂದೆ-ಮಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದ ಆಸ್ತಿ ವಿವಾದವೇ ಹತ್ಯೆಗೆ ಕಾರಣವೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



