ನವದೆಹಲಿ: ತಮ್ಮ ದೇಶದ ವಾಣಿಜ್ಯ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ 140 ಕೋಟಿ ಜನರ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾದಿಂದ ತೈಲ ಖರೀದಿ ಮುಂದುವರಿಸಲಾಗುತ್ತಿದೆ ಎಂದು ಅಮೆರಿಕಕ್ಕೆ ಭಾರತ ದೃಢವಾಗಿ ತಿರುಗೇಟು ನೀಡಿದೆ.
ಅಮೆರಿಕದ ‘ಶೇ. 100 ರಷ್ಟು ಆಮದು ಸುಂಕ’ ಮಸೂದೆಗೆ ಭಾರತದ ಕೌಂಟರ್: ರಷ್ಯಾದಿಂದ ಇಂಧನ ಖರೀದಿಸುವ ದೇಶಗಳ ಮೇಲೆ ಶೇ.100 ರಷ್ಟು ಭಾರಿ ಆಮದು ಸುಂಕ ವಿಧಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಧಿಕಾರ ನೀಡುವ ‘ರಷ್ಯಾ ಮತ್ತು ಇರಾನ್ ನಿರ್ಬಂಧಗಳ ಕಾಯ್ದೆ-2026’ ಅನ್ನು ಅಮೆರಿಕ ಸಂಸತ್ತು ಅಂಗೀಕರಿಸಿದ ಬೆನ್ನಲ್ಲೇ ಭಾರತ ಈ ಸ್ಪಷ್ಟನೆ ನೀಡಿದೆ. ಈ ಬೆಳವಣಿಗೆಯನ್ನು ಅಮೆರಿಕ ಕಾಂಗ್ರೆಸ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಎಲ್ಲಾ ಪ್ರಕ್ರಿಯೆಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ.
“ಇಂಧನ ಭದ್ರತೆ ಕಾಪಾಡಲು ಸಂಪೂರ್ಣ ಬದ್ಧ”: ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, “ಈ ಹಿಂದೆಯೂ ಹಲವು ಬಾರಿ ಸ್ಪಷ್ಟಪಡಿಸಿದಂತೆ, ದೇಶದ 140 ಕೋಟಿ ಜನರ ಇಂಧನ ಅಗತ್ಯವನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಬದಲಾಗುತ್ತಿರುವ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ, ವಿವಿಧ ಮೂಲಗಳಿಂದ ಕಚ್ಚಾತೈಲ ಖರೀದಿಸುವುದನ್ನು ಭಾರತ ಮುಂದುವರಿಸಲಿದೆ. ಈ ವಿಚಾರವಾಗಿ ಕಳೆದ ಕೆಲವು ತಿಂಗಳುಗಳಿಂದ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಈ ನಿರ್ಧಾರವು ದ್ವಿಪಕ್ಷೀಯ ಬಾಂಧವ್ಯ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೂ ಬೀರುವ ಪರಿಣಾಮಗಳ ಕುರಿತು ಅಮೆರಿಕಕ್ಕೆ ವಿವರಿಸಲಾಗಿದೆ” ಎಂದು ತಿಳಿಸಲಾಗಿದೆ.
ಸಂಭಾವ್ಯ ಬಿಕ್ಕಟ್ಟು ತಡೆಯಲು ಪರ್ಯಾಯ ಮೂಲಗಳಿಂದ ಕಚ್ಚಾತೈಲ ಖರೀದಿ: ಪ್ರಸ್ತುತ ಭಾರತವು ಸಮುದ್ರ ಮಾರ್ಗದ ಮೂಲಕ ರಷ್ಯಾದಿಂದ ಅತಿ ಹೆಚ್ಚು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವ ದೇಶವಾಗಿದೆ. ಆದಾಗ್ಯೂ, ಅಮೆರಿಕದ ಹೊಸ ನಿರ್ಧಾರದಿಂದ ಎದುರಾಗಬಹುದಾದ ಯಾವುದೇ ಪರಿಣಾಮಗಳನ್ನು ಎದುರಿಸಲು ಸರ್ಕಾರವು ದೇಶೀಯ ವ್ಯಾಪಾರ ಮತ್ತು ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಲಿದೆ. ಇದರ ಭಾಗವಾಗಿ, ಸಂಭಾವ್ಯ ತೈಲ ಬಿಕ್ಕಟ್ಟನ್ನು ತಪ್ಪಿಸಲು ಭಾರತೀಯ ತೈಲ ಸಂಸ್ಕರಣಾಗಾರಗಳು ಈಗಾಗಲೇ ಅಮೆರಿಕ, ಬ್ರೆಜಿಲ್, ಕೆನಡಾ, ವೆನೆಜುವೆಲಾ ಹಾಗೂ ಆಫ್ರಿಕಾದ ವಿವಿಧ ದೇಶಗಳಿಂದಲೂ ಕಚ್ಚಾತೈಲ ಖರೀದಿಸಲು ಚಾಲನೆ ನೀಡಿವೆ.



