ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದಲ್ಲದೆ, ಪ್ರಶ್ನಿಸಿದ ಪ್ರೇಮಿಯ ಮೇಲೆ ಕಬ್ಬಿಣದ ರಾಡ್‌ನಿಂದ ಭೀಕರ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ‘ಘೋಸ್ಟ್ ಟ್ಯಾಟೂ ಆರ್ಟಿಸ್ಟ್’ ಖ್ಯಾತಿಯ ಹಾಗೂ ನಟ ಅರ್ಜುನ್ ಹಲ್ಲೆಗೊಳಗಾದ ಸಂತ್ರಸ್ತ.
ಪರಿಚಯ, ಪ್ರೀತಿ ಮತ್ತು ಮದುವೆ ನೆಪದಲ್ಲಿ ಹಣ ವಂಚನೆ: ಸುಮಾರು ಎರಡು ವರ್ಷಗಳ ಹಿಂದೆ ಅರ್ಜುನ್ ಅವರ ಟ್ಯಾಟೂ ಸ್ಟುಡಿಯೋದಲ್ಲಿ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು. ತನಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಪತಿ ಕಾರಣಾಂತರಗಳಿಂದ ಮೃತಪಟ್ಟಿರುವುದಾಗಿ ಸಂಪ್ರಿತಾ ಪರಿಚಯಿಸಿಕೊಂಡಿದ್ದಳು. ದಿನಕಳೆದಂತೆ ಈ ಪರಿಚಯ ಪ್ರೀತಿಗೆ ತಿರುಗಿ, ಅರ್ಜುನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಈ ವೇಳೆ ಮದುವೆಯಾಗುವುದಾಗಿ ನಂಬಿಸಿದ್ದ ಸಂಪ್ರಿತಾಗೆ ಅರ್ಜುನ್ ಹಲವು ಬಾರಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು. ಆದರೆ ಸಂಪ್ರಿತಾ ಕಳೆದ ಒಂದು ವರ್ಷದಿಂದ ಮದುವೆಯನ್ನು ಮುಂದೂಡುತ್ತಲೇ ಬಂದಿದ್ದಳು.
ಪರಪುರುಷನ ಜೊತೆ ಸಿಕ್ಕಿಬಿದ್ದಾಗ ರಾಡ್‌ನಿಂದ ಹಲ್ಲೆ: ಇತ್ತೀಚೆಗೆ ಅರ್ಜುನ್ ಕರೆ ಮಾಡಿದಾಗ ಸಂಪ್ರಿತಾ ಕರೆ ಸ್ವೀಕರಿಸಿರಲಿಲ್ಲ. ಇದರಿಂದ ಅನುಮಾನಗೊಂಡು ಆಕೆಯ ಮನೆಗೆ ತೆರಳಿದಾಗ, ಸಂಪ್ರಿತಾ ಮತ್ತೊಬ್ಬ ಪರಪುರುಷನ ಜೊತೆ ಅಶ್ಲೀಲವಾಗಿ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಇದನ್ನು ಅರ್ಜುನ್ ಪ್ರಶ್ನಿಸಿದಾಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಕಬ್ಬಿಣದ ರಾಡ್‌ನಿಂದ ಅರ್ಜುನ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಮಾನ ಮರ್ಯಾದೆಗೆ ಅಂಜಿ ಅಪಘಾತ ಎಂದಿದ್ದ ಅರ್ಜುನ್!: ಸಾಮಾಜಿಕ ಜಾಲತಾಣದಲ್ಲಿ 1 ಮಿಲಿಯನ್‌ಗೂ ಅಧಿಕ ಫಾಲೋವರ್ಸ್ ಹೊಂದಿರುವ ಹಾಗೂ ಸಿನಿಮಾಗಳಲ್ಲೂ ನಟಿಸುತ್ತಿರುವ ಅರ್ಜುನ್, ಆರಂಭದಲ್ಲಿ ತಮ್ಮ ಮರ್ಯಾದೆಗೆ ಅಂಜಿ ಅಪಘಾತದಿಂದ ಗಾಯಗೊಂಡಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಸದ್ಯ ಹಲ್ಲೆ ಹಾಗೂ ವಂಚನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



