ಮುಂಬೈ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ನಗರ ಪಂಚಾಯತ್ ಆಡಳಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಯುವಸೇನಾ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಗರ ಪಂಚಾಯತ್ ಮುಖ್ಯಾಧಿಕಾರಿಯ ಕಚೇರಿಗೆ ಎರಡು ಬೀದಿ ನಾಯಿ ಮರಿಗಳನ್ನು ತಂದು ಅಧಿಕಾರಿಯ ಮೇಜಿನ ಮೇಲೆಯೇ ಬಿಟ್ಟು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಶಿವಸೇನೆಯ ಯುವ ಘಟಕವಾದ ಯುವಸೇನಾದ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚೀಲಗಳಲ್ಲಿ ತಂದಿದ್ದ ಎರಡು ನಾಯಿ ಮರಿಗಳನ್ನು ನಗರ ಪಂಚಾಯತ್ ಮುಖ್ಯಾಧಿಕಾರಿ ಧೀರಜ್ ಭಾಮ್ರೆ ಅವರ ಮೇಜಿನ ಮೇಲೆಯೇ ಬಿಟ್ಟಿದ್ದಾರೆ.
ಮೇಜಿನ ಮೇಲೆ ಬಿಟ್ಟ ಬಳಿಕ ನಾಯಿ ಮರಿಗಳು ಅತ್ತಿತ್ತ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದೇ ವೇಳೆ ಅಧಿಕಾರಿಯ ಮೇಜಿನ ಮೇಲೆ ನೋಟುಗಳ ಹಾರವನ್ನೂ ಇಟ್ಟು ಕಾರ್ಯಕರ್ತರು ಆಡಳಿತದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ನಿಫಾಡ್ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈಗಾಗಲೇ ಹಲವು ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿದ್ದರೂ ನಗರ ಪಂಚಾಯತ್ ಆಡಳಿತ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಗಣೇಶೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ಹಾವಳಿ ಮತ್ತಷ್ಟು ಹೆಚ್ಚಾಗಿದೆ ಎಂದು ಯುವಸೇನಾ ಮುಖಂಡ ವಿಕ್ರಮ್ ರಂಧವೆ ಆರೋಪಿಸಿದ್ದಾರೆ. ಗಣೇಶ ಮಂಟಪಗಳಿಗೆ ಭೇಟಿ ನೀಡುವ ಭಕ್ತರು ಹಾಗೂ ಸಾರ್ವಜನಿಕರು ನಾಯಿಗಳ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ಪಟ್ಟಣದಲ್ಲಿ ಕೂಡಲೇ ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಅಭಿಯಾನ ಆರಂಭಿಸಬೇಕು, ನಾಯಿಗಳನ್ನು ಹಿಡಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಶಾಶ್ವತ ಕ್ರಮ ಕೈಗೊಳ್ಳಬೇಕು ಎಂದು ಯುವಸೇನಾ ಮುಖಂಡರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ತಕ್ಷಣ ಪರಿಹರಿಸುವ ಬದಲು ಆಡಳಿತವು ಕೇವಲ ಟೆಂಡರ್ ಪ್ರಕ್ರಿಯೆಗಳಲ್ಲೇ ಕಾಲಹರಣ ಮಾಡುತ್ತಿದೆ ಎಂದು ರಂಧವೆ ಕಿಡಿಕಾರಿದ್ದಾರೆ. ಆಡಳಿತ ಮಂಡಳಿ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಮತ್ತೆ ಬೀದಿ ನಾಯಿಗಳನ್ನು ಮುಖ್ಯಾಧಿಕಾರಿಗಳ ಕಚೇರಿಯೊಳಗೆ ತಂದು ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.



