ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ತೆರಿಗೆ ನೀತಿಯನ್ನು ವಿರೋಧಿಸಿ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರು ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ.
ಇದರ ಪರಿಣಾಮ ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಜಲ್ಲಿ ಹಾಗೂ ಎಂ-ಸ್ಯಾಂಡ್ ಉತ್ಪಾದನೆ ಮತ್ತು ಪೂರೈಕೆ ಸ್ಥಗಿತಗೊಂಡಿದೆ.
ಮುಷ್ಕರದ ಹಿನ್ನೆಲೆಯಲ್ಲಿ ರಸ್ತೆ, ಮನೆ, ವಾಣಿಜ್ಯ ಕಟ್ಟಡ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಜಲ್ಲಿ ಮತ್ತು ಎಂ-ಸ್ಯಾಂಡ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.
ಮುಷ್ಕರಕ್ಕೆ ಕಾರಣವೇನು?
ಒಂದೇ ಕಲ್ಲು ಉತ್ಪನ್ನಕ್ಕೆ ಎರಡು ಬಾರಿ ರಾಯಧನ ವಸೂಲಿ ಮಾಡುತ್ತಿರುವುದನ್ನು ಕ್ವಾರಿ ಹಾಗೂ ಕ್ರಷರ್ ಮಾಲೀಕರು ವಿರೋಧಿಸಿದ್ದಾರೆ. ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಗಣಿ ಉತ್ಪನ್ನಗಳಿಗೆ ನೇರವಾಗಿ ರಾಯಧನ ಕಡಿತ ಮಾಡಲಾಗುತ್ತಿದೆ. ಇದರ ಜೊತೆಗೆ ಕ್ವಾರಿ ಮತ್ತು ಕ್ರಷರ್ ಮಾಲೀಕರಿಂದಲೂ ಪ್ರತ್ಯೇಕವಾಗಿ ರಾಯಧನ ಸಂಗ್ರಹಿಸಲಾಗುತ್ತಿದೆ ಎಂದು ಸಂಘದ ಮುಖಂಡರು ಆರೋಪಿಸಿದ್ದಾರೆ.
ಒಂದೇ ಕಚ್ಚಾ ಉತ್ಪನ್ನಕ್ಕೆ ಎರಡು ಬಾರಿ ರಾಯಧನ ವಿಧಿಸುವುದನ್ನು ಪ್ರಶ್ನಿಸಿರುವ ಮಾಲೀಕರು, ಈ ಕೂಡಲೇ ಏಕೀಕೃತ ರಾಯಧನ ನೀತಿ ಜಾರಿಗೊಳಿಸಿ ಒಂದೇ ಹಂತದಲ್ಲಿ ರಾಯಧನ ಸಂಗ್ರಹಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಲ್ಲಿ, ಎಂ-ಸ್ಯಾಂಡ್ ಉತ್ಪಾದನೆ ಬಂದ್:
ಚಿಕ್ಕಬಳ್ಳಾಪುರ ಜಿಲ್ಲೆಯ ನೂರಾರು ಕ್ವಾರಿ ಮತ್ತು ಕ್ರಷರ್ ಘಟಕಗಳು ಮುಷ್ಕರದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಜಲ್ಲಿಕಲ್ಲು, ಕಾಂಕ್ರೀಟ್ ಪುಡಿ ಹಾಗೂ ಎಂ-ಸ್ಯಾಂಡ್ ಉತ್ಪಾದನೆ, ಲೋಡಿಂಗ್ ಮತ್ತು ಸಾಗಣೆ ಕೂಡ ಬಂದ್ ಆಗಿದೆ.
ಮುಷ್ಕರ ಮುಂದುವರಿದರೆ ಖಾಸಗಿ ಮನೆಗಳು, ಅಪಾರ್ಟ್‌ಮೆಂಟ್‌ಗಳು, ರಸ್ತೆ, ಸೇತುವೆ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರ ತಕ್ಷಣ ಸಂಘದ ಮುಖಂಡರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಕ್ವಾರಿ-ಕ್ರಷರ್ ಮಾಲೀಕರು ಹಾಗೂ ವಿತರಕರು ಒತ್ತಾಯಿಸಿದ್ದಾರೆ.
ಸಮಸ್ಯೆ ಬಗೆಹರಿಯುವವರೆಗೂ ಮುಷ್ಕರದಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.



