ಹಾವೇರಿ: ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ರಾಣೆಬೆನ್ನೂರು ತಾಲೂಕಿನ ಹುಲ್ಲತ್ತಿ ಗ್ರಾಮದ ರೈತರ ಜಮೀನುಗಳ ಬಳಿ ಕಳೆದ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜಮೀನಿಗೆ ತೆರಳಲು ರೈತರು ಹಿಂದೇಟು ಹಾಕುವಂತಾಗಿದೆ.
ಅರಣ್ಯ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಚಿರತೆ ಓಡಾಡುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಕುರಿಗಾಹಿಗಳು ಕೂಡ ಚಿರತೆಯನ್ನು ಪ್ರತ್ಯಕ್ಷವಾಗಿ ನೋಡಿದ್ದು, ಕುರಿ ಹಿಂಡಿನಲ್ಲಿದ್ದ ಮೂರ್ನಾಲ್ಕು ಮೇಕೆ ಮರಿಗಳನ್ನು ಚಿರತೆ ಹೊತ್ತೊಯ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇತ್ತೀಚೆಗೆ ಜಮೀನಿನಲ್ಲಿ ರೈತರು ಕೆಲಸ ಮಾಡುತ್ತಿದ್ದ ವೇಳೆ ಚಿರತೆ ಏಕಾಏಕಿ ಎತ್ತುಗಳ ಮೇಲೆ ದಾಳಿ ಮಾಡಲು ಮುಂದಾಗಿದೆ. ಈ ವೇಳೆ ರೈತರು ಜೋರಾಗಿ ಕಿರುಚಿಕೊಂಡಿದ್ದರಿಂದ ಹೆದರಿದ ಚಿರತೆ ಅಲ್ಲಿಂದ ಓಡಿ ಹೋಗಿದೆ. ಘಟನೆಯಿಂದ ಆತಂಕಗೊಂಡ ರೈತರು ಎತ್ತುಗಳನ್ನು ಕರೆದುಕೊಂಡು ಮನೆಗೆ ವಾಪಸ್ ತೆರಳಿದ್ದಾರೆ.
ಇನ್ನು ರೈತರ ಜಮೀನುಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಕೂಡ ಪತ್ತೆಯಾಗಿದ್ದು, ಗ್ರಾಮಸ್ಥರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಚಿರತೆಯನ್ನು ಕೂಡಲೇ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಚಿರತೆ ಸೆರೆಗೆ ಬೋನುಗಳನ್ನು ಅಳವಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.



