ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಕೆಂಗಣ್ಣು ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿದೆ.
ಕಂಜಕ್ಟಿವೈಟಿಸ್ ಸೋಂಕಿನಿಂದ ಶಾಲಾ ಮಕ್ಕಳು ಸೇರಿದಂತೆ ಹಲವರು ಬಳಲುತ್ತಿದ್ದು, ಕಣ್ಣು ಕೆಂಪಾಗುವುದು, ನಿರಂತರವಾಗಿ ನೀರು ಸುರಿಯುವುದು, ತುರಿಕೆ ಹಾಗೂ ಕಣ್ಣಿನಲ್ಲಿ ಅಂಟಿಕೊಳ್ಳುವಂತಹ ಸಮಸ್ಯೆಗಳು ಕಂಡುಬರುತ್ತಿವೆ.
ಕಂಜಕ್ಟಿವೈಟಿಸ್ ಕಣ್ಣಿನ ಹೊರಪದರದಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದ್ದು, ಸೋಂಕಿತ ವ್ಯಕ್ತಿಯ ಕಣ್ಣು ಅಥವಾ ಅವರು ಬಳಸಿದ ವಸ್ತುಗಳ ಸಂಪರ್ಕದಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಹೀಗಾಗಿ ಶಾಲೆ, ಕಚೇರಿ ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಾರ್ವಜನಿಕರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಕೆಂಗಣ್ಣು ಸೋಂಕಿನ ಲಕ್ಷಣಗಳು ಕಂಡುಬಂದವರು ಪದೇಪದೇ ಕಣ್ಣು ಉಜ್ಜಿಕೊಳ್ಳಬಾರದು. ಕಣ್ಣು ಮುಟ್ಟಿದ ಬಳಿಕ ಕೈಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಸೋಂಕಿತರು ಬಳಸುವ ಟವೆಲ್, ಕರವಸ್ತ್ರ ಸೇರಿದಂತೆ ವೈಯಕ್ತಿಕ ವಸ್ತುಗಳನ್ನು ಇತರರು ಬಳಸದಂತೆ ಎಚ್ಚರಿಕೆ ವಹಿಸಬೇಕು.
ವಿಶೇಷವಾಗಿ ಮಕ್ಕಳಲ್ಲಿ ಕಣ್ಣು ಕೆಂಪಾಗುವುದು ಅಥವಾ ನೀರು ಸುರಿಯುವಂತಹ ಲಕ್ಷಣಗಳು ಕಂಡುಬಂದರೆ ಪೋಷಕರು ನಿರ್ಲಕ್ಷ್ಯ ಮಾಡಬಾರದು. ಸೋಂಕು ಮತ್ತಷ್ಟು ಹರಡದಂತೆ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ಇನ್ನು ಕಣ್ಣಿನಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮೆಡಿಕಲ್ ಶಾಪ್‌ಗೆ ತೆರಳಿ ಸ್ವಯಂ ಆಗಿ ಐ ಡ್ರಾಪ್ಸ್ ಖರೀದಿಸಿ ಬಳಸುವುದು ಸರಿಯಲ್ಲ. ವೈದ್ಯರ ಸಲಹೆಯಿಲ್ಲದೆ ಯಾವುದೇ ಕಣ್ಣಿನ ಔಷಧಿ ಬಳಸಬಾರದು. ಕಣ್ಣಿನ ಸಮಸ್ಯೆ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಅಗತ್ಯವಾಗಿದೆ.

