ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗಳಿಗೆ ಇ-ಸ್ವತ್ತು ನೀಡಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಕ್ರಮ ಕೈಗೊಂಡಿದ್ದಾರೆ.
ಪ್ರಥಮ ಹಂತದಲ್ಲಿ ಗ್ರಾಮಠಾಣಾ ವ್ಯಾಪ್ತಿಯ ಆಸ್ತಿಗಳಿಗೆ ಅಕ್ಟೋಬರ್ 2ರಿಂದ ಇ-ಸ್ವತ್ತು ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇ-ಸ್ವತ್ತು ನೀಡಿಕೆಯಲ್ಲಿ ಎದುರಾಗುತ್ತಿರುವ ತಾಂತ್ರಿಕ ಹಾಗೂ ಪ್ರಕ್ರಿಯಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಸರಳೀಕೃತ ‘ಇ-ಸ್ವತ್ತು-03’ ತಂತ್ರಾಂಶ ಸಿದ್ಧಪಡಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.
ನ್ಯಾಯಾಲಯದಲ್ಲಿ ವ್ಯಾಜ್ಯ ಇರುವ ಆಸ್ತಿಗಳು, ಸರ್ಕಾರಿ ಜಾಗ, ಕೆರೆ ಅಂಗಳ, ಬಿ ಖರಾಬು ಹಾಗೂ ಅರಣ್ಯ ಪ್ರದೇಶ ಒತ್ತುವರಿ ಮಾಡಿ ನಿರ್ಮಿಸಿರುವ ಮನೆಗಳನ್ನು ಹೊರತುಪಡಿಸಿ, ನಿಯಮಾನುಸಾರ ಅರ್ಹ ವಾರಸುದಾರರಿಗೆ ಇ-ಸ್ವತ್ತು ನೀಡಲಾಗುತ್ತದೆ.
ಅಕ್ಟೋಬರ್ 2ರಿಂದ ಅರ್ಜಿಗಳನ್ನು ಸ್ವೀಕರಿಸಿ, ನವೆಂಬರ್ನಲ್ಲಿ ಕನಿಷ್ಠ 10 ಲಕ್ಷ ಆಸ್ತಿಗಳಿಗೆ ಮನೆ ಬಾಗಿಲಿಗೆ ಇ-ಸ್ವತ್ತು ತಲುಪಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ದಾಖಲೆಗಳಿಲ್ಲದ ಗ್ರಾಮಠಾಣಾ ಆಸ್ತಿಗಳ ಪೈಕಿ ಹಿತ್ತಲು ಮತ್ತು ಮನೆ ಅಂಗಳ ಸೇರಿದಂತೆ 4,000 ಚದರ ಅಡಿಯೊಳಗಿನ ಆಸ್ತಿಗಳಿಗೆ ಮಾತ್ರ ಇ-ಸ್ವತ್ತು ನೀಡಲು ಅವಕಾಶ ಕಲ್ಪಿಸಲಾಗಿದೆ.
ಈ ಸಂಬಂಧ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ಪ್ರತ್ಯೇಕ ಗ್ರಾಮಸಭೆ ನಡೆಸಲಾಗುತ್ತದೆ. ಅರ್ಜಿದಾರರು ಅದೇ ಆಸ್ತಿಯಲ್ಲಿ ವಾಸಿಸುತ್ತಿದ್ದಾರೆಯೇ ಹಾಗೂ ಅವರೇ ಆಸ್ತಿಯ ನೈಜ ಮಾಲೀಕರೇ ಎಂಬುದನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಲಾಗುತ್ತದೆ.
ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು 21 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ ಕುರಿತು ಪಂಚಾಯಿತಿ ಕಚೇರಿಗಳಲ್ಲಿ ನೋಟಿಸ್ ಪ್ರಕಟಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದರೆ ನಿಯಮಾನುಸಾರ ಇ-ಸ್ವತ್ತು ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.



