ನೆಲಮಂಗಲ: 80ರ ದಶಕದ ಹಳೆಯ ಫೋಟೋ ಶೈಲಿಗೆ ಚಿತ್ರಗಳನ್ನು ಬದಲಿಸುವ ಟ್ರೆಂಡ್ ಬಳಸಿಕೊಂಡು ಸೈಬರ್ ವಂಚಕರು ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆ ನಿವಾಸಿ ವಿನೋದ್ (45) ವಂಚನೆಗೊಳಗಾದವರು. ತಮ್ಮ ಫೋಟೋವನ್ನು 80ರ ದಶಕದ ಲುಕ್ಗೆ ಬದಲಾಯಿಸಲು ಮುಂದಾದ ಅವರು, ಚಾಟ್ಜಿಪಿಟಿ ಮಾದರಿಯ ತಂತ್ರಜ್ಞಾನ ಬಳಸುವ ಆ್ಯಪ್ ಎಂದು ಭಾವಿಸಿ ಅಪರಿಚಿತ ಆ್ಯಪ್ವೊಂದನ್ನು ಮೊಬೈಲ್ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆ್ಯಪ್ ಇನ್ಸ್ಟಾಲ್ ಮಾಡಿದ ಕೆಲವೇ ಸಮಯದಲ್ಲಿ ಮೊಬೈಲ್ ಹಾಗೂ ಖಾತೆ ಹ್ಯಾಕ್ ಆಗಿದೆ ಎಂದು ಆರೋಪಿಸಲಾಗಿದೆ. ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ವಿನೋದ್ಗೆ ಕರೆ ಮಾಡಿ ₹50 ಸಾವಿರ ನೀಡುವಂತೆ ಒತ್ತಾಯಿಸಿದ್ದಾನೆ.
ಹಣ ನೀಡಲು ನಿರಾಕರಿಸಿದರೆ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ವಿನೋದ್ ಕರೆ ಕಡಿತಗೊಳಿಸಿದ ಬಳಿಕ, ವಂಚಕರು ಅವರ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳಿಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ವಿನೋದ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗುವ ಯಾವುದೇ ಫೋಟೋ ಎಡಿಟಿಂಗ್ ಸೇವೆಗಾಗಿ ಅಪರಿಚಿತ ಆ್ಯಪ್ಗಳನ್ನು ಡೌನ್ಲೋಡ್ ಮಾಡುವ ಮುನ್ನ ಅದರ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಪರಿಶೀಲಿಸುವಂತೆ ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.



