ಬೆಂಗಳೂರು: ಕೋರಮಂಗಲ ಪೊಲೀಸ್ ಠಾಣೆ ಮುಂಭಾಗ ನಿಲ್ಲಿಸಿದ್ದ ಐಷಾರಾಮಿ ಆಡಿ ಕಾರಿನೊಳಗೆ ವ್ಯಕ್ತಿಯೊಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬೆಳಗ್ಗೆ ಕಾರಿನ ಬಳಿ ಬಂದ ಹೋಟೆಲ್ ಸಿಬ್ಬಂದಿ ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ ಸುಮಾರು 2.36ಕ್ಕೆ ಕೋರಮಂಗಲ ಠಾಣೆ ಮುಂಭಾಗದ ಫಾಸ್ಟ್ಫುಡ್ ಹೋಟೆಲ್ ಬಳಿ KA-51-MG-9786 ನೋಂದಣಿ ಸಂಖ್ಯೆಯ ಆಡಿ ಕಾರನ್ನು ಪಾರ್ಕ್ ಮಾಡಲಾಗಿತ್ತು. ಬೆಳಗ್ಗೆ ಕಾರಿನ ಬಾಗಿಲು ತೆರೆದಿರುವುದನ್ನು ಗಮನಿಸಿದ ಸಿಬ್ಬಂದಿ ಒಳಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಕೋರಮಂಗಲ ಪೊಲೀಸರು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರನ್ನು ಸಲೀಂ ಅಕ್ಬರ್ ಎಂದು ಗುರುತಿಸಲಾಗಿದ್ದು, ಅವರು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು ಎನ್ನಲಾಗಿದೆ.
ವ್ಯವಹಾರ ಸಂಬಂಧ ಬೆಂಗಳೂರಿಗೆ ಬಂದಿದ್ದ ಸಲೀಂ ಅಕ್ಬರ್, ರಾತ್ರಿ ಕಾರನ್ನು ಹೋಟೆಲ್ ಮುಂಭಾಗ ನಿಲ್ಲಿಸಿದ್ದರು ಎನ್ನಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಸದ್ಯ ಕೋರಮಂಗಲ ಪೊಲೀಸರು ಹಾಗೂ ಸೋಕೋ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಸಾವಿಗೆ ನಿಖರ ಕಾರಣವೇನು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.



