ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಔಷಧಿ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಫಾರ್ಮಸಿ ಪರವಾನಗಿಯನ್ನು ಔಷಧ ನಿಯಂತ್ರಣ ಇಲಾಖೆ ರದ್ದುಗೊಳಿಸಿದೆ.
ವಿಶೇಷ ತನಿಖಾ ತಂಡದ ಶಿಫಾರಸಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಲೈಸೆನ್ಸ್ ರದ್ದಾದ ಆಸ್ಪತ್ರೆಗಳ ಫಾರ್ಮಸಿಗಳಲ್ಲಿ ಔಷಧಿ ಮಾರಾಟ ಮಾಡದಂತೆ ಎಸ್‌ಐಟಿ ಅಧಿಕಾರಿಗಳು ಸೂಚನೆ ನೀಡಿದ್ದು, ಫಾರ್ಮಸಿಗಳನ್ನು ಮುಚ್ಚಿಸಲಾಗಿದೆ. ಅಲ್ಲದೆ, ನಕಲಿ ಔಷಧಿ ಪೂರೈಕೆಯಾಗಿರುವ ನಗರದ 25ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿಗೆ ಹಂತ ಹಂತವಾಗಿ ನೋಟಿಸ್ ನೀಡಲು ತನಿಖಾ ತಂಡ ಸಿದ್ಧತೆ ನಡೆಸಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಬೆಂಗಳೂರಿನ ಸುಮಾರು 70ರಿಂದ 80 ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಮೆಡಿಕಲ್ ಸ್ಟೋರ್‌ಗಳಿಗೆ ನಕಲಿ ಔಷಧಿಗಳು ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸಂಬಂಧಪಟ್ಟ ಆಸ್ಪತ್ರೆಗಳ ಆಡಳಿತ ಮಂಡಳಿ ಹಾಗೂ ಫಾರ್ಮಸಿ ಮುಖ್ಯಸ್ಥರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಮಿನರ್ವ ಸರ್ಕಲ್ ಬಳಿ ಇರುವ ಕೃಪಾ ಹೆಲ್ತ್ ಕೇರ್ ಮೇಲೆ ಎಸ್‌ಐಟಿ ಈ ಹಿಂದೆ ದಾಳಿ ನಡೆಸಿ ನಕಲಿ ಔಷಧಿ ಜಾಲವನ್ನು ಪತ್ತೆಹಚ್ಚಿತ್ತು. ಅಲ್ಲಿಂದಲೇ ಹಲವು ಫಾರ್ಮಸಿಗಳಿಗೆ ನಕಲಿ ಔಷಧಿ ಸರಬರಾಜಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.



