ಬೆಂಗಳೂರು: ಬೆಂಗಳೂರಿನ ಪ್ರಮುಖ ಹಸಿರು ತಾಣವಾಗಿರುವ ಕಬ್ಬನ್ ಪಾರ್ಕ್‌ಗೆ ಲಾಲ್‌ಬಾಗ್ ಮಾದರಿಯಲ್ಲಿ ಪ್ರವೇಶ ಶುಲ್ಕ ವಿಧಿಸುವ ಕುರಿತು ತೋಟಗಾರಿಕೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ.
ನಗರದ ಹೃದಯಭಾಗದಲ್ಲಿರುವ ಕಬ್ಬನ್ ಪಾರ್ಕ್‌ಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುತ್ತಿದ್ದು, ವಾರಾಂತ್ಯದಲ್ಲಿ ಜನದಟ್ಟಣೆ ಮತ್ತಷ್ಟು ಹೆಚ್ಚಾಗುತ್ತಿದೆ.
ಸುಮಾರು 300 ಎಕರೆ ವಿಶಾಲ ಪ್ರದೇಶದಲ್ಲಿ ಹರಡಿರುವ ಕಬ್ಬನ್ ಪಾರ್ಕ್ ಬೆಂಗಳೂರಿನ ಜನರಿಗೆ ವಾಯುವಿಹಾರ, ವಾಕಿಂಗ್, ಜಾಗಿಂಗ್ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪ್ರಮುಖ ಸ್ಥಳವಾಗಿದೆ. ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಉದ್ಯಾನವನಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದ್ದು, ವಾರಾಂತ್ಯದಲ್ಲಿ ಸಾವಿರಾರು ಮಂದಿ ಉದ್ಯಾನವನದತ್ತ ಆಗಮಿಸುತ್ತಾರೆ.
ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉದ್ಯಾನವನದ ಸ್ವಚ್ಛತೆ, ಭದ್ರತೆ ಹಾಗೂ ನಿರ್ವಹಣೆಯ ಮೇಲಿನ ಹೊರೆ ಕೂಡ ಹೆಚ್ಚಾಗಿದೆ. ಉದ್ಯಾನವನದ ಹಸಿರು ಪರಿಸರವನ್ನು ಕಾಪಾಡುವುದು, ಸಾರ್ವಜನಿಕ ಸೌಲಭ್ಯಗಳನ್ನು ನಿರ್ವಹಿಸುವುದು ಹಾಗೂ ಸ್ವಚ್ಛತಾ ವ್ಯವಸ್ಥೆಗಳನ್ನು ಮುಂದುವರಿಸುವುದಕ್ಕೆ ಹೆಚ್ಚಿನ ಪ್ರಮಾಣದ ಹಣದ ಅಗತ್ಯವಿದೆ.
ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ಗೆ ಪ್ರವೇಶ ಶುಲ್ಕ ನಿಗದಿ ಮಾಡುವ ಸಾಧ್ಯತೆ ಕುರಿತು ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ. ಪ್ರವೇಶ ಶುಲ್ಕದಿಂದ ಸಂಗ್ರಹವಾಗುವ ಹಣವನ್ನು ಉದ್ಯಾನವನದ ಸ್ವಚ್ಛತೆ, ನಿರ್ವಹಣೆ ಹಾಗೂ ಇತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಉದ್ದೇಶವೂ ಇಲಾಖೆಯ ಚಿಂತನೆಯಲ್ಲಿದೆ ಎನ್ನಲಾಗಿದೆ.
ಸದ್ಯ ಇದು ಚರ್ಚೆಯ ಹಂತದಲ್ಲಿದ್ದು, ಶುಲ್ಕ ವಿಧಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಶುಲ್ಕ ಜಾರಿಯಾದರೆ ಸಾರ್ವಜನಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದೂ ಕುತೂಹಲ ಮೂಡಿಸಿದೆ.



