ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸುಲ್ತಾನಪುರ ಸಮೀಪದ ತೆಗ್ಗಿನ ಕ್ಯಾಂಪ್‌ನಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಪಟ್ಟಿದ್ದು, ಮತ್ತೋರ್ವ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೃತ ರೈತನನ್ನು ದ್ಯಾವಪ್ಪ (35) ಎಂದು ಗುರುತಿಸಲಾಗಿದೆ. ರಾಮಕೃಷ್ಣ ಎಂಬುವವರ ಜಮೀನಿನಲ್ಲಿ ಜೋಳ ಬಿತ್ತನೆ ಕೆಲಸಕ್ಕಾಗಿ ಮೂವರು ರೈತರು ತೆರಳಿದ್ದರು. ಈ ವೇಳೆ ಏಕಾಏಕಿ ಮಳೆ ಆರಂಭವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಮೂವರು ರೈತರು ಮರದ ಕೆಳಗೆ ನಿಂತಿದ್ದರು.
ಈ ಸಂದರ್ಭದಲ್ಲಿ ಏಕಾಏಕಿ ಸಿಡಿಲು ಬಡಿದಿದೆ. ಸಿಡಿಲಿನ ತೀವ್ರತೆಗೆ ದ್ಯಾವಪ್ಪ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ ಅಯ್ಯಪ್ಪ ಎಂಬ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೋರ್ವ ರೈತ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಅಯ್ಯಪ್ಪ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಬಳಗಾನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಡಿಲು ಬಡಿದು ರೈತ ಮೃತಪಟ್ಟಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.



