ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ತನಿಖಾಧಿಕಾರಿಗಳಿಗೆ ಮತ್ತೊಂದು ಸ್ಫೋಟಕ ಸಾಕ್ಷಿ ಲಭ್ಯವಾಗಿದೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ (Basavaraj Kannale) ಬರೆದಿಟ್ಟಿದ್ದ ರಹಸ್ಯ ಡೈರಿಯ ಹಾಳೆಗಳು ಸಿಕ್ಕಿದ್ದು, ಕೋಟ್ಯಂತರ ರೂಪಾಯಿ ವಸೂಲಿ ಡೀಲ್‌ನ ವಿವರಗಳು ಬಯಲಾಗಿವೆ.
ತನಿಖಾಧಿಕಾರಿಗಳು ಆರೋಪಿ ಬಸವರಾಜ್ ಕನ್ನಾಳೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ಈ ಲೆಕ್ಕದ ಹಾಳೆಗಳು ಸಿಕ್ಕಿವೆ. ಆತ ಪರೀಕ್ಷೆ ಬರೆದ ಅಭ್ಯರ್ಥಿಗಳ ಪಟ್ಟಿ, ಪಾವತಿಯಾದ ಮೊತ್ತ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಜಲಸಂಪನ್ಮೂಲ ಇಲಾಖೆಯ ಉಲ್ಲೇಖದೊಂದಿಗೆ ವಿವರವಾದ ಲೆಕ್ಕ ಇಟ್ಟುಕೊಂಡಿದ್ದ. ಸುಮಾರು 20ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಕ್ರಮವಾಗಿ ತರಬೇತಿ ನೀಡಲು ಈತ ಮೂರು ವಿಲ್ಲಾಗಳನ್ನು ಬುಕ್ ಮಾಡಿದ್ದ ವಿಚಾರವೂ ಬೆಳಕಿಗೆ ಬಂದಿದೆ.
ಡೈರಿಯಲ್ಲಿ ‘ಬರಬೇಕಾಗಿರುವುದು’ ಎಂದು ಕನ್ನಡದಲ್ಲೇ ಸ್ಪಷ್ಟವಾಗಿ ಬರೆದುಕೊಂಡು, ಅಭ್ಯರ್ಥಿಗಳಿಂದ ಇನ್ನೂ ಬರಬೇಕಿದ್ದ ಬಾಕಿ ಹಣದ ಪಟ್ಟಿಯನ್ನು ದಾಖಲಿಸಿದ್ದಾನೆ:
- ಗೋವಿಂದ – ₹5,00,000
- ಹರೀಶ್ – ₹10,00,000
- ಪದ್ಮಾವತಿ – ₹10,00,000
- ಮಂಜುನಾಥ್ – ₹10,00,000
- ಪೂಜಾ – ₹10,00,000
- ಅಶ್ವಿನಿ ಕುಮಾರ್ – ₹10,00,000
- ಮೋಹನ್ ಕುಮಾರ್ – ₹5,00,000
- ಸಂಗಮೇಶ್ – ₹10,00,000
ಡೈರಿಯಲ್ಲಿ ಉಲ್ಲೇಖವಾಗಿರುವ ಪಶುವೈದ್ಯಾಧಿಕಾರಿಗಳ ಎಲಿಜಿಬಿಲಿಟಿ ಲಿಸ್ಟ್‌ನಲ್ಲಿದ್ದ ಇಬ್ಬರು ಅಭ್ಯರ್ಥಿಗಳ ಹೆಸರು ಹಾಗೂ ರಿಜಿಸ್ಟ್ರೇಷನ್ ನಂಬರ್ ಕೆಪಿಎಸ್‌ಸಿ ಬಿಡುಗಡೆ ಮಾಡಿದ್ದ ಅಧಿಕೃತ ಅರ್ಹತಾ ಪಟ್ಟಿಗೆ ನಿಖರವಾಗಿ ಹೋಲಿಕೆಯಾಗುತ್ತಿದೆ. ಒಟ್ಟು 600 ಅಭ್ಯರ್ಥಿಗಳಿದ್ದ ಪಟ್ಟಿಯಿಂದ ಅಂತಿಮ 329 ಮಂದಿಯ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿಗೆ ಬೇಡಿಕೆ ಇಡಲಾಗಿತ್ತೇ ಎಂಬ ಗಂಭೀರ ಅನುಮಾನ ವ್ಯಕ್ತವಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಡೈರಿಯಲ್ಲಿದ್ದ ಇಬ್ಬರು ಅಭ್ಯರ್ಥಿಗಳು ಎಲಿಜಿಬಿಲಿಟಿ ಲಿಸ್ಟ್‌ನಲ್ಲಿದ್ದರೂ ಅಂತಿಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಅವರು ಹಣ ನೀಡಲಿಲ್ಲವೇ ಅಥವಾ ಹಣ ಪಡೆದು ಕನ್ನಾಳೆ ಕೈಕೊಟ್ಟನೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಸದ್ಯ ಈ ಡೈರಿ ಆಧಾರದ ಮೇಲೆ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ.



