ಬೆಂಗಳೂರು: ಕಾರಿನಲ್ಲಿದ್ದ ಗಣೇಶ ಮೂರ್ತಿಯನ್ನು ಕಂಡು ಕಾರಿಗೆ ಕಾಲಿನಿಂದ ಒದ್ದು, ಗಣೇಶ ದೇವರಲ್ಲ ಎಂದು ಕಿರುಚಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಣ್ಣೂರು ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ನಗರದ ಹೊರಮಾವು ಬಳಿಯ ಬಂಜಾರ ಲೇಔಟ್ನಲ್ಲಿ ಈ ಘಟನೆ ನಡೆದಿತ್ತು. ಬೆಳಗ್ಗೆ ವಾಕಿಂಗ್ಗೆ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಗಣೇಶ ಮೂರ್ತಿ ಇದ್ದ ಕಾರಿಗೆ ಕಾಲಿನಿಂದ ಒದ್ದು ಹೋಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ನಂತರ ಸಿಸಿಟಿವಿ ದೃಶ್ಯವನ್ನು ಗಮನಿಸಿದ ಸ್ಥಳೀಯರು ವ್ಯಕ್ತಿಯನ್ನು ಪ್ರಶ್ನಿಸಿದ್ದರು. ಈ ವೇಳೆ ಅವರು ಗಣೇಶ ಏನು ದೇವರಾ ಎಂದು ಪ್ರಶ್ನಿಸುತ್ತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ತಮಿಳಿನಲ್ಲಿ ಮಾತನಾಡುತ್ತಾ ಸ್ಥಳೀಯರೊಂದಿಗೆ ಕಿರಿಚಾಡಿದ ಆರೋಪವೂ ಕೇಳಿಬಂದಿತ್ತು.
ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದರು. ಪ್ರಕರಣವನ್ನು ಪರಿಶೀಲಿಸಿದ ಹೆಣ್ಣೂರು ಪೊಲೀಸರು, ಕೃತ್ಯ ಎಸಗಿದ ವ್ಯಕ್ತಿ ಶಿವಕುಮಾರ್ ಎಂಬುದನ್ನು ಪತ್ತೆಹಚ್ಚಿದ್ದಾರೆ.
ಶಿವಕುಮಾರ್ ಅವರನ್ನು ಪರಿಶೀಲಿಸಿದಾಗ ಅವರು ನಿಮಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಪೊಲೀಸರಿಗೆ ತಿಳಿದುಬಂದಿದೆ. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು, ನಿಮಾನ್ಸ್ಗೆ ಕರೆದೊಯ್ದು ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.



