ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ಸಮೀಪದಲ್ಲಿರುವ ಪ್ರಸಿದ್ಧ ಮುತ್ಯಾಲಮಡು ಜಲಪಾತ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದು, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಕಳೆದ ಮೂರು ದಿನಗಳಿಂದ ಆನೇಕಲ್ ಸುತ್ತಮುತ್ತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುತ್ಯಾಲಮಡು ಫಾಲ್ಸ್‌ನಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಬೆಟ್ಟಗುಡ್ಡಗಳ ಮೇಲಿನಿಂದ ಮರ-ಗಿಡಗಳ ನಡುವೆ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿರುವ ಜಲಧಾರೆ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ನೂರಾರು ಅಡಿ ಎತ್ತರದಿಂದ ಧುಮ್ಮಿಕ್ಕುವ ನೀರು ಮುತ್ತಿನ ಹನಿಗಳಂತೆ ಕಂಗೊಳಿಸುತ್ತಿದ್ದು, ಜಲಪಾತದ ಸೌಂದರ್ಯ ಮತ್ತಷ್ಟು ಹೆಚ್ಚಾಗಿದೆ. ಮಳೆಯಿಂದಾಗಿ ಮುತ್ಯಾಲಮಡು ಪ್ರವಾಸಿ ತಾಣಕ್ಕೆ ಹೊಸದೊಂದು ಜೀವಕಳೆ ಬಂದಿದ್ದು, ಜಲಪಾತದ ವೈಯಾರವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಜಲಪಾತದ ಭೋರ್ಗರೆತ ಹಾಗೂ ಸುತ್ತಮುತ್ತಲಿನ ಹಸಿರು ವಾತಾವರಣ ಪ್ರವಾಸಿಗರಿಗೆ ಪ್ರಕೃತಿಯ ಸೊಬಗನ್ನು ಸವಿಯುವ ಅವಕಾಶ ಕಲ್ಪಿಸಿದೆ. ಬೆಂಗಳೂರಿಗೆ ಸಮೀಪದಲ್ಲೇ ಇರುವ ಮುತ್ಯಾಲಮಡು ಫಾಲ್ಸ್ ಇದೀಗ ಪ್ರವಾಸಿಗರ ಹಾಟ್‌ಸ್ಪಾಟ್ ಆಗಿ ಗಮನ ಸೆಳೆಯುತ್ತಿದೆ.
ಧುಮ್ಮಿಕ್ಕುವ ಜಲಧಾರೆಯನ್ನು ಕಂಡು ಪ್ರವಾಸಿಗರು ಫುಲ್ ಖುಷಿಯಾಗಿದ್ದು, ಪ್ರಕೃತಿಯ ಸೌಂದರ್ಯವನ್ನು ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿಯುತ್ತಿದ್ದಾರೆ.

