ನವದೆಹಲಿ: ಚುನಾವಣಾ ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (SIR) ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಇಂದು (ಅಕ್ಟೋಬರ್ 2) ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅಲ್ಲದೆ, ಜಂತರ್ ಮಂತರ್ ಸುತ್ತಮುತ್ತ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNS) ಸೆಕ್ಷನ್ 163ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೊಲೀಸ್ ಆದೇಶದ ಅನ್ವಯ, ಪೂರ್ವಾನುಮತಿ ಇಲ್ಲದೆ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗೂಡುವುದು, ಸಭೆ ನಡೆಸುವುದು, ಮೆರವಣಿಗೆ ಹಾಗೂ ಧರಣಿ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜೊತೆಗೆ, ಘೋಷಣೆ ಕೂಗುವುದು, ಭಾಷಣ ಮಾಡುವುದು ಹಾಗೂ ಬ್ಯಾನರ್, ಫಲಕಗಳು, ಕೋಲು ಮತ್ತು ಇತರೆ ವಸ್ತುಗಳನ್ನು ಹೊತ್ತೊಯ್ಯುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ, ಶಾಂತಿ ಸುವ್ಯವಸ್ಥೆ ಮತ್ತು ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಜಂತರ್ ಮಂತರ್ನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ಮೇಲ್ವಿಚಾರಣೆಗಾಗಿ ಡ್ರೋನ್ಗಳನ್ನು ಬಳಸಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಂತರ್ ಮಂತರ್ ಸಮೀಪದ 11 ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಿ ಸಂಚಾರ ನಿಯಂತ್ರಿಸಲಾಗಿದೆ.
ಪೊಲೀಸರ ನಿಷೇಧಾಜ್ಞೆಯ ನಡುವೆಯೂ ಪ್ರತಿಭಟನೆಗೆ ಯತ್ನಿಸಿದ ಆಮ್ ಆದ್ಮಿ ಪಕ್ಷದ (AAP) ಹಿರಿಯ ನಾಯಕ ಸೌರಭ್ ಭಾರದ್ವಾಜ್ ಹಾಗೂ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA), ರಾಜ್ಯಸಭಾ ಸದಸ್ಯ ಮನೋಜ್ ಝಾ ಹಾಗೂ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಕರೆ ನೀಡಿದ್ದ ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಆರ್ಜೆಡಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಹಾಗೂ ನಾಗರಿಕ ಸಮಾಜದ ಪ್ರಮುಖರು ಭಾಗವಹಿಸಿದ್ದರು.



