ಬೆಂಗಳೂರು/ಮಂಗಳೂರು: ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ತನಿಖೆಯನ್ನು ಚುರುಕುಗೊಳಿಸಿದ್ದು, ಅತ್ಯಂತ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಪ್ರಕರಣದ ಕುರಿತಾದ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ತಕ್ಷಣವೇ ಹಸ್ತಾಂತರಿಸುವಂತೆ ಎಸ್ಐಟಿ, ಕೇಂದ್ರ ತನಿಖಾ ದಳ (CBI) ಹಾಗೂ ರಾಜ್ಯ ಅಪರಾಧ ತನಿಖಾ ವಿಭಾಗಕ್ಕೆ (CID) ಪತ್ರ ಬರೆದಿದೆ.
ಈ ಹಿಂದೆ ಸೌಜನ್ಯ ಪ್ರಕರಣದ ತನಿಖೆಯನ್ನು ಸಿಐಡಿ ಮತ್ತು ಸಿಬಿಐ ಅಧಿಕಾರಿಗಳು ನಡೆಸಿದ್ದರು. ಆ ತನಿಖೆಗಳ ಸಂದರ್ಭದಲ್ಲಿ ಸಂಗ್ರಹಿಸಲಾದ ಎಲ್ಲಾ ಪ್ರಮುಖ ಮಾಹಿತಿ, ಸಾಕ್ಷ್ಯಾಧಾರಗಳು, ಚಾರ್ಜ್ಶೀಟ್ ಹಾಗೂ ದಾಖಲೆಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಎಸ್ಐಟಿ ಈ ಪತ್ರ ಬರೆದು ಅಧಿಕೃತವಾಗಿ ಕೋರಿದೆ.
ಸುಪ್ರೀಂಕೋರ್ಟ್ ಇತ್ತೀಚಿಗಷ್ಟೇ ಸೌಜನ್ಯ ಪ್ರಕರಣದ ಮರುತನಿಖೆಗೆ ಸ್ಪಷ್ಟ ಆದೇಶ ನೀಡಿತ್ತು. ಉನ್ನತ ನ್ಯಾಯಾಲಯದ ಈ ನಿರ್ದೇಶನದ ಬೆನ್ನಲ್ಲೇ ಸರ್ಕಾರ ವಿಶೇಷ ತನಿಖಾ ದಳವನ್ನು ರಚಿಸಿತ್ತು. ಇದೀಗ ಎಸ್ಐಟಿ ತನಿಖೆಯನ್ನು ಅಧಿಕೃತವಾಗಿ ಪ್ರಾರಂಭಿಸಿದ್ದು, ಹಳೆಯ ದಾಖಲೆಗಳ ಪರಿಶೀಲನೆಯೊಂದಿಗೆ ಮುಂದಿನ ಹಂತದ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.



