ಬೆಂಗಳೂರು: ನಗರದ ನಾಯಂಡಹಳ್ಳಿ ವಿನಾಯಕ ಲೇಔಟ್ನಲ್ಲಿರುವ ಬಾಡಿಗೆ ಮನೆಯೊಂದರಲ್ಲಿ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು ಒಂದೇ ಕುಟುಂಬದ ಆರು ಮಂದಿ ಗಾಯಗೊಂಡಿದ್ದಾರೆ.
ರಾಯಚೂರು ಮೂಲದ ಕುಟುಂಬ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕರಿಲಿಂಗಪ್ಪ (40) ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಸುಮಾರು 6 ಗಂಟೆ ವೇಳೆಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.
ಘಟನೆಯಲ್ಲಿ ಕರಿಲಿಂಗಪ್ಪ (40), ಲಕ್ಷ್ಮಮ್ಮ (43), ಚೈತ್ರಾ (11), ಬಸವ (9), ಗೀತಾ ಹಾಗೂ 3 ವರ್ಷದ ಗಿರಿಜಾ ಗಾಯಗೊಂಡಿದ್ದಾರೆ.
ಸ್ಫೋಟದಿಂದ ಗಾಯಗೊಂಡ ಆರು ಮಂದಿಯನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಗಾಯಾಳುಗಳ ಪೈಕಿ ಲಕ್ಷ್ಮಮ್ಮ ಹಾಗೂ ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಸಿಲಿಂಡರ್ ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.



