ಬೆಂಗಳೂರು: ಬೆಂಗಳೂರಿನಲ್ಲಿ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಕ್ರಮಕ್ಕೆ ಮುಂದಾಗಿದೆ.
ಕೋರ್ಟ್ ಸೂಚನೆಯಂತೆ ನಡೆಸಿದ ಸಮೀಕ್ಷೆಯಲ್ಲಿ ನಗರದ ಸುಮಾರು 25 ಸಾವಿರ ಪಿಜಿಗಳ ಪೈಕಿ 10 ಸಾವಿರಕ್ಕೂ ಹೆಚ್ಚು ಪಿಜಿಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದೆ ಎಂದು ಜಿಬಿಎ ತಿಳಿಸಿದೆ.
ಕೆಲವು ಪಿಜಿಗಳಿಗೆ ಅಗತ್ಯ ಪರವಾನಗಿ, ಕಟ್ಟಡದ ಅನುಮೋದಿತ ನಕ್ಷೆ ಹಾಗೂ ಅಗ್ನಿ ಸುರಕ್ಷತಾ ಪ್ರಮಾಣಪತ್ರ ಇಲ್ಲದಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಈ ಅಕ್ರಮ ಪಿಜಿಗಳ ಮಾಹಿತಿಯನ್ನು ಕೋರ್ಟ್ ಮುಂದೆ ಮಂಡಿಸಲು ಜಿಬಿಎ ಸಿದ್ಧತೆ ನಡೆಸಿದೆ.
ಕೋರ್ಟ್ ಸೂಚನೆಯಂತೆ ನಿಯಮ ಉಲ್ಲಂಘಿಸುವ ಪಿಜಿಗಳಿಗೆ 15 ದಿನಗಳ ನೋಟಿಸ್ ನೀಡಿ, ಬಳಿಕ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಬಿಎ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಸಭೆ ನಡೆಸಿ ಮುಂದಿನ ಕ್ರಮದ ಕುರಿತು ಚರ್ಚಿಸಿದ್ದಾರೆ.
ಪಿಜಿಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ 30 ದಿನಗಳ ವಿಡಿಯೋ ಬ್ಯಾಕಪ್ ಕಡ್ಡಾಯವಾಗಿದೆ. ಪ್ರತಿಯೊಬ್ಬ ನಿವಾಸಿಗೆ ಕನಿಷ್ಠ 70 ಚದರ ಅಡಿ ಜಾಗ, ಸ್ವಚ್ಛ ಶೌಚಾಲಯ, ಸ್ನಾನಗೃಹ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು.
ಅಡುಗೆಮನೆ ಹೊಂದಿರುವ ಪಿಜಿಗಳು ಮೂರು ತಿಂಗಳೊಳಗೆ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆಯಬೇಕು. ನಿವಾಸಿಗಳ ಸುರಕ್ಷತೆಗಾಗಿ 24 ಗಂಟೆಯೂ ಸೆಕ್ಯುರಿಟಿ ಸಿಬ್ಬಂದಿ ಇರಬೇಕು. ವಾಣಿಜ್ಯ ಪರವಾನಗಿ ಪಡೆಯುವ ಮೊದಲು ಅಗ್ನಿ ಸುರಕ್ಷತಾ ಪ್ರಮಾಣಪತ್ರ ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಡ್ಡಾಯವಾಗಿದೆ.
ನಗರದಲ್ಲಿ 25 ಸಾವಿರಕ್ಕೂ ಹೆಚ್ಚು ಪಿಜಿಗಳಿವೆ ಎಂದು ಪಿಜಿ ಅಸೋಸಿಯೇಷನ್ ತಿಳಿಸಿದ್ದು, ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಆಕ್ಷೇಪವಿಲ್ಲ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಜಿಬಿಎ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಸ್ಪಷ್ಟವಾಗಬೇಕಿದೆ.



