ಗದಗ: ಭಾರತೀಯ ಸೈನ್ಯದಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹುಯಿಲಗೋಳ ಗ್ರಾಮದ ನಿವಾಸಿ ‘ನಾಯಕ’ ರಹಿಮಾನ ಎಂ. ಹೆಬ್ಬಳ್ಳಿ ಅವರು ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಗೆಳೆಯರ ಬಳಗ, ಶಾಲಾ ಮಕ್ಕಳು ಹಾಗೂ ಯುವಕರು ಅದ್ದೂರಿಯಾಗಿ ಸ್ವಾಗತಿಸಿದರು.
ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ರಹಿಮಾನ ಹೆಬ್ಬಳ್ಳಿ ಅವರು ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು, ಗ್ರಾಮಸ್ಥರು ಹಾಗೂ ಗೆಳೆಯರು ಹೂಮಳೆ ಸುರಿಸಿ ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಅವರನ್ನು ತೆರೆದ ಜೀಪಿನಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಮನೆಗೆ ಕರೆದೊಯ್ಯಲಾಯಿತು.
ಮೆರವಣಿಗೆಯ ಸಂದರ್ಭದಲ್ಲಿ ನಾಡಕವಿ ಹುಯಿಲಗೋಳ ನಾರಾಯಣರಾವ್ ಹಾಗೂ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಲಾಯಿತು. ನಂತರ ಗ್ರಾಮದ ಶ್ರೀ ಸೂಗೀರೇಶ್ವರ ದೇವಸ್ಥಾನ, ಶ್ರೀ ದುರ್ಗಾದೇವಿ ದೇವಸ್ಥಾನ ಹಾಗೂ ಶ್ರೀ ಮಾರುತಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮೆರವಣಿಗೆಯುದ್ದಕ್ಕೂ ವಿದ್ಯಾರ್ಥಿಗಳು ಹಾಗೂ ಯುವಕರು ‘ಭಾರತ ಮಾತಾ ಕೀ ಜೈ’, ‘ನಾಯಕ ರಹಿಮಾನ ಹೆಬ್ಬಳ್ಳಿಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಮೊಳಗಿಸಿದರು. ವಿದ್ಯಾರ್ಥಿಗಳು ಹಾಗೂ ಯುವಕರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದರು.
17 ವರ್ಷಗಳ ಸೈನ್ಯ ಸೇವೆ ಪೂರ್ಣಗೊಳಿಸಿ ತಾಯ್ನಾಡಿಗೆ ಮರಳಿದ ರಹಿಮಾನ ಹೆಬ್ಬಳ್ಳಿ ಅವರನ್ನು ಗ್ರಾಮದ ವಿವಿಧೆಡೆ ಸನ್ಮಾನಿಸಲಾಯಿತು. ದೇವಸ್ಥಾನ ಮಂಡಳಿಗಳು, ಗ್ರಾಮ ಪಂಚಾಯಿತಿ, ಗೆಳೆಯರ ಬಳಗ ಹಾಗೂ ಗ್ರಾಮಸ್ಥರು ಅವರನ್ನು ಗೌರವಿಸಿ ಶುಭ ಹಾರೈಸಿದರು. ಕುಟುಂಬಸ್ಥರು ಆರತಿ ಬೆಳಗಿ ಆತ್ಮೀಯವಾಗಿ ಮನೆಗೆ ಬರಮಾಡಿಕೊಂಡರು.
ರಹಿಮಾನ ಹೆಬ್ಬಳ್ಳಿ ಅವರು ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಗಡಿ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಯುವಕರಾದ ಚಂದ್ರು ಹಂಚಿನಾಳ, ಮುತ್ತು ಪಡೇಸೂರ, ಚಂದ್ರು ಪೂಜಾರ, ಮಂಜುನಾಥ ಹುಯಿಲಗೋಳ, ಹುಸೇನಸಾಬ ಕುರಹಟ್ಟಿ, ಖಾದರಸಾಬ ಬೂದಿಹಾಳ, ಮಹಮ್ಮದಲಿ ಕೌತಾಳ, ರಮೇಶ ಹೊಸಮನಿ, ದೇವು ಹುಯಿಲಗೋಳ, ಶಿವರಾಯಪ್ಪ ಯಲಿಗಾರ, ಜಗದೀಶ ಹೊಸಳ್ಳಿ, ಶರಣಪ್ಪ ಹುಯಿಲಗೋಳ, ಶರಣಪ್ಪ ಕಡಿಯವರ, ರಮೇಶ ಕಡಿಯವರ, ರಂಗನಾಥ ಕಡಿಯವರ, ಹೇಮಂತ ದಾಸರ, ಮುತ್ತು ಅಂಗಡಿ, ಮಹೇಶ ಹಾಳಕೇರಿ, ಮಹೇಶಗೌಡ ಪಾಟೀಲ, ಹುಚ್ಚನಗೌಡ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಗದಗ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಮುಂಡರಗಿ, ವಿಶ್ವನಾಥ ನಾಯ್ಕರ, ಡಿ.ಎಸ್. ದಿಡ್ಡಿಮನಿ ನೇತೃತ್ವದಲ್ಲಿ ಹಲವು ಮಾಜಿ ಸೈನಿಕರು ಹಾಗೂ ವೀರನಾರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಹಿಮಾನ ಹೆಬ್ಬಳ್ಳಿ ಅವರ ತಂದೆ ಮೌಲಾಸಾಬ ಅವರು ತಮ್ಮ ಐದು ಮಕ್ಕಳ ಪೈಕಿ ನಾಲ್ವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದರು. ರಹಿಮಾನ ಸೇರಿದಂತೆ ಇಬ್ಬರು ಮಕ್ಕಳು ಇದೀಗ ಮಾಜಿ ಸೈನಿಕರಾಗಿದ್ದು, ಮತ್ತಿಬ್ಬರು ಇನ್ನೂ ಸೇನಾ ಸೇವೆಯಲ್ಲಿದ್ದಾರೆ.

