ಗದಗ: ಒಂದೆಡೆ ಕುಡಿಯುವ ನೀರಿಗೆ ಪರದಾಟ, ಮತ್ತೊಂದೆಡೆ ಸರಬರಾಜಿನ ಮುಖ್ಯ ಪೈಪ್ ಒಡೆದು ರಾತ್ರಿಯಿಡೀ ಅಪಾರ ಪ್ರಮಾಣದ ನೀರು ಪೋಲು! ಗದಗ-ಬೆಟಗೇರಿ ಅವಳಿ ನಗರಕ್ಕೆ ಮತ್ತೆ ಕುಡಿಯುವ ನೀರಿನ ಆತಂಕ ಎದುರಾಗಿದೆ.
ಮುಂಡರಗಿ ತಾಲೂಕಿನ ದಿಂಡೂರ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ಮುಖ್ಯ ಪೈಪ್ ಒಡೆದು, ನೀರು ಸುಮಾರು 20 ಅಡಿ ಎತ್ತರಕ್ಕೆ ಚಿಮ್ಮಿದೆ. ಪರಿಣಾಮ ಇಡೀ ರಾತ್ರಿ ಸಾವಿರಾರು ಲೀಟರ್ ಕುಡಿಯುವ ನೀರು ಹಳ್ಳದ ಪಾಲಾಗಿದೆ.
ಹಳ್ಳದಲ್ಲಿ ಬೋರ್ವೆಲ್ ಕೊರೆಸುವ ವೇಳೆ ಪೈಪ್ಗೆ ಹಾನಿಯಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಪೈಪ್ ಒಡೆಯಲು ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ವಿಷಯ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರು ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈಗಾಗಲೇ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಸಂದರ್ಭದಲ್ಲೇ ಮುಖ್ಯ ಪೈಪ್ ಒಡೆದು ನೀರು ಪೋಲಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪೈಪ್ಲೈನ್ಗೆ ಹಾನಿಯಾಗಲು ಕಾರಣರಾದವರನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನೀರು ಬೇಕೆಂದು ಜನರು ಪರದಾಡುತ್ತಿರುವಾಗ, ಕುಡಿಯುವ ನೀರೇ ರಾತ್ರಿಯಿಡೀ ಹಳ್ಳದ ಪಾಲಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

