HomeKarnataka Newsಬೆಂಗಳೂರಿನಲ್ಲಿ ವರುಣನ ಅಬ್ಬರ; ಹಲವೆಡೆ ಧಾರಾಕಾರ ಮಳೆ, ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ವರುಣನ ಅಬ್ಬರ; ಹಲವೆಡೆ ಧಾರಾಕಾರ ಮಳೆ, ರಸ್ತೆಗಳು ಜಲಾವೃತ

For Dai;y Updates Join Our whatsapp Group

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಜೆ ವೇಳೆಗೆ ವರುಣ ಅಬ್ಬರಿಸಿದ್ದು, ನಗರದ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯ ಪರಿಣಾಮ ಹಲವು ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನದಿಯಂತೆ ಹರಿದಿದ್ದು, ಹಲವು ಕಡೆಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಶೇಷಾದ್ರಿಪುರಂ ಸೇರಿದಂತೆ ನಗರದ ಹಲವು ಅಂಡರ್‌ಪಾಸ್‌ಗಳು ಹಾಗೂ ಪ್ರಮುಖ ರಸ್ತೆಗಳಲ್ಲೂ ಮಳೆ ನೀರು ನಿಂತು ವಾಹನಗಳು ಮುಳುಗುವ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಸವಾರರು ರಸ್ತೆಯಲ್ಲಿ ಮುಂದೆ ಸಾಗಲು ಪರದಾಡುವಂತಾಗಿದೆ.

ಬೆಂಗಳೂರು ಉತ್ತರ ಹಾಗೂ ಕೇಂದ್ರ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಹಲವು ಪ್ರಮುಖ ಬಡಾವಣೆಗಳು ವರುಣನ ಆರ್ಭಟಕ್ಕೆ ತತ್ತರಿಸಿವೆ. ಗೊರಗುಂಟೆಪಾಳ್ಯ, ಎಂಟನೇ ಮೈಲಿ, ದಾಸರಹಳ್ಳಿ ಹಾಗೂ ರಾಜಾಜಿನಗರ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.

ಇನ್ನು ಹೆಬ್ಬಾಳ, ಎಂ.ಜಿ. ರಸ್ತೆ, ಜಕ್ಕೂರು, ಟಿ.ಸಿ. ಪಾಳ್ಯ, ಶಿವಾಜಿನಗರ, ಗಾಂಧಿನಗರ ಹಾಗೂ ಕೆ.ಆರ್. ಪುರಂ ಭಾಗಗಳಲ್ಲೂ ಭಾರೀ ಮಳೆಯಿಂದ ರಸ್ತೆಗಳು ಜಲಾವೃತಗೊಂಡಿವೆ. ಶೇಷಾದ್ರಿಪುರಂ ಮುಖ್ಯರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತ ಪರಿಣಾಮ ವಾಹನ ಸಂಚಾರಕ್ಕೆ ಭಾರೀ ತೊಂದರೆಯಾಗಿದೆ.

ಸಂಜೆ ಶಾಲಾ-ಕಾಲೇಜುಗಳು ಮುಗಿಯುವ ಹಾಗೂ ಕಚೇರಿಗಳಿಂದ ಉದ್ಯೋಗಿಗಳು ಮನೆಗೆ ಮರಳುವ ಪೀಕ್ ಅವರ್‌ನಲ್ಲೇ ಮಳೆ ಸುರಿದಿರುವುದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಹೆಬ್ಬಾಳ ಫ್ಲೈಓವರ್, ಗೊರಗುಂಟೆಪಾಳ್ಯ ಜಂಕ್ಷನ್ ಹಾಗೂ ಎಂ.ಜಿ. ರಸ್ತೆಯಲ್ಲಿ ವಾಹನಗಳು ಗಂಟೆಗಟ್ಟಲೆ ಸಾಲುಗಟ್ಟಿ ನಿಲ್ಲುವಂತಾಗಿದೆ.

ಮುಂದಿನ ಅವಧಿಯಲ್ಲೂ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಜಲಾವೃತಗೊಂಡಿರುವ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳಲ್ಲಿ ಅನಗತ್ಯವಾಗಿ ಸಂಚರಿಸದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img