HomeCrime Newsಡೇಟಿಂಗ್ ಆ್ಯಪ್ ನಲ್ಲಿ ಪರಿಚಯ, ನಿರ್ಜನ ಪ್ರದೇಶಕ್ಕೆ ಕರೆಸಿ ಹಲ್ಲೆ-ಬ್ಲ್ಯಾಕ್ʼಮೇಲ್; ಮೂವರ ಗ್ಯಾಂಗ್ ಅರೆಸ್ಟ್

ಡೇಟಿಂಗ್ ಆ್ಯಪ್ ನಲ್ಲಿ ಪರಿಚಯ, ನಿರ್ಜನ ಪ್ರದೇಶಕ್ಕೆ ಕರೆಸಿ ಹಲ್ಲೆ-ಬ್ಲ್ಯಾಕ್ʼಮೇಲ್; ಮೂವರ ಗ್ಯಾಂಗ್ ಅರೆಸ್ಟ್

For Dai;y Updates Join Our whatsapp Group

ಚಿಕ್ಕಬಳ್ಳಾಪುರ: ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡು, ಬಳಿಕ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಹಲ್ಲೆ ನಡೆಸಿ ಹಣ ದೋಚುತ್ತಿದ್ದ ಹಾಗೂ ಖಾಸಗಿ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಮೂವರನ್ನು ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದ ಮಹೇಶ್, ನಾಯನಹಳ್ಳಿಯ ಚೇತನ್ ಹಾಗೂ ಹೊಸಕೋಟೆ ಮೂಲದ ಅರುಣ್ ಎಂದು ಗುರುತಿಸಲಾಗಿದೆ.

ಆ್ಯಪ್‌ನಲ್ಲಿ ಪರಿಚಯ.. ನಿರ್ಜನ ಪ್ರದೇಶಕ್ಕೆ ಕರೆ!

ಪೊಲೀಸರ ತನಿಖೆಯ ಪ್ರಕಾರ, ಆರೋಪಿಗಳು Grindr ಡೇಟಿಂಗ್ ಆ್ಯಪ್ ಮೂಲಕ ಬಳಕೆದಾರರೊಂದಿಗೆ ಪರಿಚಯ ಬೆಳೆಸುತ್ತಿದ್ದರು. ಬಳಿಕ ಭೇಟಿಯಾಗುವ ನೆಪದಲ್ಲಿ ಅವರನ್ನು ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು, ಜಾತವಾರ ಹಾಗೂ ಕೊಂಡೇನಹಳ್ಳಿ ಸುತ್ತಮುತ್ತಲಿನ ನಿರ್ಜನ ಪ್ರದೇಶಗಳಿಗೆ ಕರೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲಿ ಸಂತ್ರಸ್ತರ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಆರೋಪ

ಚಿತ್ರೀಕರಿಸಿದ ಫೋಟೋ ಮತ್ತು ವಿಡಿಯೋಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಸಂತ್ರಸ್ತರಿಂದ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು. PhonePe ಮೂಲಕ ಹಣ ವರ್ಗಾಯಿಸಿಕೊಂಡ ಬಳಿಕ ಮೊಬೈಲ್‌ಗಳನ್ನು ಕಸಿದುಕೊಂಡು ಸಂತ್ರಸ್ತರನ್ನು ನಿರ್ಜನ ಪ್ರದೇಶದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಸಂತ್ರಸ್ತರ ಕುಟುಂಬದವರಿಗೂ ಬೆದರಿಕೆ ಹಾಕಲಾಗುತ್ತಿತ್ತು ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ವ್ಯಾಪಾರಿ, ಶಿಕ್ಷಕರ ಮೇಲೂ ಇದೇ ರೀತಿ ದಾಳಿ

ಕಳೆದ ಒಂದು ವಾರದಲ್ಲಿ ಚಿಕ್ಕಬಳ್ಳಾಪುರದ ತರಕಾರಿ ವ್ಯಾಪಾರಿ ಹಾಗೂ ಶಿಡ್ಲಘಟ್ಟದ ಶಿಕ್ಷಕರೊಬ್ಬರನ್ನು ಇದೇ ರೀತಿಯಲ್ಲಿ ಬಲೆಗೆ ಬೀಳಿಸಿ ಹಲ್ಲೆ ನಡೆಸಿ ಹಣ ದೋಚಲಾಗಿದೆ ಎಂಬ ದೂರುಗಳು ಪೊಲೀಸರಿಗೆ ಬಂದಿದ್ದವು. ಈ ಪ್ರಕರಣಗಳ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

8 ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ

ಬಂಧಿತ ಆರೋಪಿಗಳು ಇದುವರೆಗೆ 8 ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಗೌರಿಬಿದನೂರು, ಚಿಂತಾಮಣಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಭಾಗಗಳಲ್ಲೂ ಇದೇ ಮಾದರಿಯ ಕೃತ್ಯಗಳನ್ನು ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ವಿರುದ್ಧದ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಮತ್ತಷ್ಟು ಸಂತ್ರಸ್ತರು ಹಾಗೂ ಪ್ರಕರಣಗಳಿವೆಯೇ ಎಂಬುದನ್ನೂ ಪರಿಶೀಲಿಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img