ಬೆಂಗಳೂರು: ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಜಾರಿ ನಿರ್ದೇಶನಾಲಯದ ತನಿಖೆ ವೇಳೆ ಹಣದ ವಹಿವಾಟು, ಅಭ್ಯರ್ಥಿಗಳ ಸಂಪರ್ಕ ಹಾಗೂ ಪರೀಕ್ಷೆಗೂ ಮುನ್ನ ಉತ್ತರಗಳನ್ನು ನೀಡಿದ್ದರೆನ್ನಲಾದ ಚೀಟಿಗಳ ಬಗ್ಗೆ ಹಲವು ಮಾಹಿತಿಗಳು ಹೊರಬಿದ್ದಿವೆ ಎನ್ನಲಾಗಿದೆ.
ತನಿಖೆಯ ವೇಳೆ ಶಿವಶಂಕರಪ್ಪ ಸಾಹುಕಾರ್ ಅವರು ಗೀತಾ ಅವರಿಗೆ ಫ್ಲಾಟ್ ಬಾಡಿಗೆಗಾಗಿ ಮೂರ್ನಾಲ್ಕು ತಿಂಗಳ ಕಾಲ 70ರಿಂದ 75 ಸಾವಿರ ರೂಪಾಯಿ ಹಣ ನೀಡಿದ್ದರೆನ್ನಲಾಗಿದೆ. ಅಪಾರ್ಟ್‌ಮೆಂಟ್ ಬಾಡಿಗೆಗೆ ಸಹಾಯ ಮಾಡುವ ಉದ್ದೇಶದಿಂದ ಈ ಹಣ ನೀಡಲಾಗಿತ್ತು ಎಂದು ಶಿವಶಂಕರಪ್ಪ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಗೀತಾ ಮತ್ತು ಅವರ ಮಗಳ ಖಾತೆಗಳಿಗೆ ಸಾಹುಕಾರ್ ಅವರ ಕಡೆಯಿಂದ ಹೆಚ್ಚುವರಿ ಹಣ ವರ್ಗಾವಣೆಯಾಗಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ಮತ್ತೊಂದೆಡೆ, ಪ್ರಕರಣದಲ್ಲಿ ಆರು ಅಭ್ಯರ್ಥಿಗಳು ಭಾಗಿಯಾಗಿರುವ ಶಂಕೆ ಇಡಿ ತನಿಖೆಯಲ್ಲಿ ವ್ಯಕ್ತವಾಗಿದ್ದು, ವಿನುತಾ ಮಲ್ಲಪ್ಪ ಹಿತ್ತಲಮನಿ, ನಂದೀಶ್, ಸೂಗುರೇಶ್, ತೇಜಸ್, ನವೀನ್ ಕುಮಾರ್ ಮತ್ತು ಕಿರಣ್ ಕುಮಾರ್ ಎನ್ ಎಂಬ ಹೆಸರುಗಳು ತನಿಖೆಯಲ್ಲಿ ಕೇಳಿಬಂದಿವೆ ಎನ್ನಲಾಗಿದೆ.
ಈ ಆರು ಅಭ್ಯರ್ಥಿಗಳು ಸಾಹುಕಾರ್ ಮತ್ತು ಗೀತಾ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಪರೀಕ್ಷೆಗೂ ಮುನ್ನ ಉತ್ತರಗಳನ್ನು ತಲುಪಿಸುವ ವ್ಯವಸ್ಥೆ ನಡೆದಿತ್ತೇ ಎಂಬ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದರಲ್ಲೂ ಗ್ಯಾನೇಂದ್ರ ಕುಮಾರ್ ಎಂಬಾತ ಚಿಕ್ಕ ಚೀಟಿಗಳ ಮೂಲಕ ಸುಮಾರು 80 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದ ಎನ್ನಲಾಗಿದೆ. ಚೀಟಿಯ ಮೇಲ್ಭಾಗದಲ್ಲಿ ಅಭ್ಯರ್ಥಿಗೆ ಸಂಬಂಧಿಸಿದ ಮೂರು ಇಂಗ್ಲಿಷ್ ಅಕ್ಷರಗಳ ಕೋಡ್ ಹಾಗೂ ಆನ್ಸರ್ ಬುಕ್‌ಲೆಟ್ ಸೀರೀಸ್ ಬರೆಯಲಾಗುತ್ತಿತ್ತು ಎನ್ನಲಾಗಿದೆ.
ಶಿವಶಂಕರಪ್ಪ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಇಂತಹ ಚೀಟಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಸದ್ಯ ಆರೋಪಿಗಳನ್ನು ಅಕ್ಟೋಬರ್ 19ರವರೆಗೆ ಇಡಿ ಕಸ್ಟಡಿಗೆ ಪಡೆದುಕೊಂಡಿದ್ದು, ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದ ಹಣದ ವಹಿವಾಟು ಮತ್ತು ಅಭ್ಯರ್ಥಿಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ.
ಆದರೆ, ಶಿವಶಂಕರಪ್ಪ ಅವರ ಖಾತೆಯಿಂದ ಗೀತಾ ಅವರಿಗೆ ಹಣ ವರ್ಗಾವಣೆಯಾಗಿದೆ ಎಂಬ ಆರೋಪವನ್ನು ಅವರ ಪರ ವಕೀಲರು ನಿರಾಕರಿಸಿದ್ದಾರೆ. ಹಿಂದೆಯೇ ಸಹಾಯಕ್ಕಾಗಿ ಹಣ ನೀಡಲಾಗಿತ್ತು. ಬಹಳ ಹಿಂದಿನ ಹಣ ವರ್ಗಾವಣೆಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಉಲ್ಲೇಖಿಸಲಾಗುತ್ತಿದೆ ಎಂದು ವಕೀಲರು ತಿಳಿಸಿದ್ದಾರೆ.



