ಬೆಂಗಳೂರು: ಮೊಬೈಲ್ ಬಳಸುವಾಗ ಎಚ್ಚರಿಕೆ ವಹಿಸುವ ಅಗತ್ಯವನ್ನು ನೆನಪಿಸುವ ಘಟನೆಯೊಂದು ನಗರದ ಚಿಕ್ಕಬಾಣವಾರದಲ್ಲಿ ನಡೆದಿದೆ.
ಯುವಕನೊಬ್ಬ ಕೈಯಲ್ಲಿ ಹಿಡಿದು ಮೊಬೈಲ್ ಬಳಸುತ್ತಿದ್ದ ವೇಳೆ ಏಕಾಏಕಿ ಹೊಗೆ ಕಾಣಿಸಿಕೊಂಡು, ಬಳಿಕ ಬೆಂಕಿ ಹೊತ್ತಿಕೊಂಡಿದೆ.
ಚಿಕ್ಕಬಾಣವಾರದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ವಿವೇಕ್ ಎಂಬ ಯುವಕ ಮೊಬೈಲ್ ಬಳಸುತ್ತಿದ್ದಾಗ ಅದರಿಂದ ಹೊಗೆ ಬರಲು ಆರಂಭಿಸಿದೆ. ಏನಾಗುತ್ತಿದೆ ಎಂದು ಗಮನಿಸುವಷ್ಟರಲ್ಲಿ ಮೊಬೈಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಗಾಬರಿಗೊಂಡ ವಿವೇಕ್ ಮೊಬೈಲ್ ಅನ್ನು ಕೈಯಿಂದ ಕೆಳಗೆ ಎಸೆದಿದ್ದಾರೆ.
ಬಳಿಕ ಮೊಬೈಲ್‌ನ ಬ್ಯಾಟರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಫೋನ್‌ಗೆ ಭಾರೀ ಹಾನಿಯಾಗಿದೆ. ಸುಮಾರು ಮೂರರಿಂದ ನಾಲ್ಕು ವರ್ಷಗಳ ಹಿಂದೆ ಖರೀದಿಸಿದ್ದ ಮೊಬೈಲ್‌ನಲ್ಲಿ ಸಾಮಾನ್ಯವಾಗಿ ಬಳಸುವ ಸಂದರ್ಭದಲ್ಲೇ ಬೆಂಕಿ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮೊಬೈಲ್ ಸುಟ್ಟು ಹಾನಿಗೀಡಾಗಿರುವುದರಿಂದ ವಿವೇಕ್ ಆಘಾತಕ್ಕೆ ಒಳಗಾಗಿದ್ದಾರೆ.



