ನವದೆಹಲಿ: ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸಂಬಂಧಿಸಿದ ಮೇಲ್ಮನವಿ ಅರ್ಜಿಗಳ ವಿಚಾರಣೆ ಇಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದೆ. ವಿನಯ್ ಕುಲಕರ್ಣಿ ಅವರಿಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಸಿಬಿಐ ಹಾಗೂ ಕೊಲೆಯಾದ ಯೋಗೇಶ್ ಗೌಡ ಅವರ ಸಹೋದರ ಗುರುನಾಥ್ ಗೌಡ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಮಹತ್ವ ಪಡೆದುಕೊಂಡಿದೆ.
ಕೆಳಹಂತದ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿ ವಿನಯ್ ಕುಲಕರ್ಣಿ ಅವರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದ ದ್ವಿಸದಸ್ಯ ಪೀಠ ನಡೆಸಲಿದೆ ಎಂದು ವರದಿಯಾಗಿದೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಜನಪ್ರತಿನಿಧಿಗಳ ವಿರುದ್ಧದ ಗಂಭೀರ ಕ್ರಿಮಿನಲ್ ಪ್ರಕರಣಗಳ ಕುರಿತು ನ್ಯಾಯಪೀಠ ಮೌಖಿಕವಾಗಿ ಪ್ರಶ್ನೆಗಳನ್ನು ಎತ್ತಿತ್ತು. ಕೊಲೆ ಅಥವಾ ದರೋಡೆ ಪ್ರಕರಣಗಳಲ್ಲಿ ಆರೋಪ ಎದುರಿಸುವವರು ವಿಧಾನಸಭೆಗೆ ಪ್ರವೇಶಿಸಬೇಕೇ ಎಂಬ ಅರ್ಥದಲ್ಲಿ ನ್ಯಾಯಪೀಠ ಕಟುವಾಗಿ ಪ್ರಶ್ನಿಸಿತ್ತು ಎಂದು ವರದಿಯಾಗಿತ್ತು.
ವಿಚಾರಣೆಯ ವೇಳೆ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ನೋಟಿಸ್ ಕೂಡ ಜಾರಿಗೊಳಿಸಿತ್ತು. ಇದೀಗ ಪ್ರಕರಣದ ವಿಚಾರಣೆ ಮುಂದುವರಿಯಲಿದ್ದು, ಜಾಮೀನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿದೆ.



