ಬೆಳಗಾವಿ: ಬೆಳಗಾವಿಯಲ್ಲಿ ಪ್ರತಿಷ್ಠಿತ ಕ್ಲಬ್, ಪಬ್ ಹಾಗೂ ಹೋಟೆಲ್‌ಗಳ ಮೇಲೆ ಪೊಲೀಸ್ ಇಲಾಖೆ ಬೃಹತ್ ದಾಳಿ ನಡೆಸಿದೆ.
ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದ್ದು, ಕೆಲವು ಕಡೆ ನಿಯಮ ಉಲ್ಲಂಘನೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ನಗರದ ವಿವಿಧ ಕ್ಲಬ್‌ಗಳು, ಹೋಟೆಲ್‌ಗಳು ಹಾಗೂ ಇತರ ಮನರಂಜನಾ ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿದ್ದ ಕೆಲವು ಕ್ಲಬ್‌ಗಳು ಮತ್ತು ಪಬ್‌ಗಳನ್ನು ಬಂದ್ ಮಾಡಿಸಲಾಗಿದೆ ಎನ್ನಲಾಗಿದೆ. ದಾಳಿ ವೇಳೆ ಕೆಲವು ಸ್ಥಳಗಳಲ್ಲಿ ಅಪ್ರಾಪ್ತರು ಕೂಡ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪ್ರಾಪ್ತರ ಪ್ರವೇಶಕ್ಕೆ ಕಡಿವಾಣ:
ದಾಳಿ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಪ್ರಕಾಶ್ ನಿಕ್ಕಂ, ಕ್ಲಬ್‌ಗಳು, ಹೋಟೆಲ್‌ಗಳು ಹಾಗೂ ಡಾಬಾಗಳ ಮೇಲೆ ತಪಾಸಣೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಅಪ್ರಾಪ್ತರು ಪ್ರವೇಶಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ಗುರುತಿನ ಚೀಟಿಗಳನ್ನು ತಪಾಸಣೆ ಮಾಡಲಾಗಿದೆ. ಕೆಲವು ಕಡೆ ನಿಯಮ ಉಲ್ಲಂಘಿಸಿರುವುದು ಕಂಡುಬಂದಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾತ್ರಿ 11ರ ಬಳಿಕ ಬಂದ್‌ಗೆ ಸೂಚನೆ;
ಕ್ಲಬ್‌ಗಳು ಮತ್ತು ಹೋಟೆಲ್‌ಗಳು ರಾತ್ರಿ 11 ಗಂಟೆಯ ಬಳಿಕ ಬಂದ್ ಆಗಿರಬೇಕು ಎಂದು ಸೂಚಿಸಲಾಗಿದೆ. ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು, ದಾಂಡಿಯಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘಿಸುವ ಕ್ಲಬ್‌ಗಳು ಹಾಗೂ ಹೋಟೆಲ್‌ಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಕ್ರಮ ಮುಂದುವರಿಯುವ ಸಾಧ್ಯತೆಯಿದೆ.



