ಬೆಂಗಳೂರು: ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸುವುದು ಹಾಗೂ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಿ, ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಸಂಬಳ ಪಾವತಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ 2022ರಲ್ಲಿ ಜಾರಿಗೆ ತಂದ ಅಗ್ನಿಪಥ ಯೋಜನೆಯಡಿ ಆಯ್ಕೆಯಾದ ಯುವಕರು ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಸೇವೆ ಪೂರ್ಣಗೊಳಿಸಿದವರ ಪೈಕಿ ಶೇ.25ರಷ್ಟು ಮಂದಿಗೆ ಸೇನೆಯಲ್ಲಿ ಮುಂದುವರಿಯಲು ಅವಕಾಶವಿದ್ದು, ಉಳಿದ ಶೇ.75ರಷ್ಟು ಅಗ್ನಿವೀರರು ನಾಗರಿಕ ಜೀವನಕ್ಕೆ ಮರಳಬೇಕಾಗುತ್ತದೆ.
2027ರ ಆರಂಭದಲ್ಲಿ ಕರ್ನಾಟಕದ ಸಾವಿರಾರು ಅಗ್ನಿವೀರರು ಸೇವೆ ಪೂರ್ಣಗೊಳಿಸಿ ರಾಜ್ಯಕ್ಕೆ ಮರಳುವ ನಿರೀಕ್ಷೆಯಿದೆ. ಹೀಗಾಗಿ, ಇತರ ರಾಜ್ಯಗಳು ಅನುಸರಿಸುತ್ತಿರುವ ಮಾದರಿಗಳನ್ನು ಅಧ್ಯಯನ ಮಾಡಿ, ಕರ್ನಾಟಕದಲ್ಲೂ ಅಗ್ನಿವೀರರಿಗೆ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಪ್ರಮಾಣದ ಮೀಸಲಾತಿ ಕಲ್ಪಿಸಲು ಅಧಿಕೃತ ನೀತಿ ರೂಪಿಸಬೇಕು ಎಂದು ಸಿ.ಟಿ. ರವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಇದೇ ವೇಳೆ, ರಾಜ್ಯದ ವಿವಿಧ ಇಲಾಖೆಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಅನುಷ್ಠಾನದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದರೆ, ಹಲವು ಇಲಾಖೆಗಳ ನೌಕರರಿಗೆ ಮೂರರಿಂದ ಐದು ತಿಂಗಳವರೆಗೆ ವೇತನ ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿ ಎಂದು ಅವರು ಹೇಳಿದ್ದಾರೆ.
ಇ-ಪಂಚಾಯಿತಿ, ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದಲ್ಲಿ ಗುತ್ತಿಗೆ ನೌಕರರ ಸೇವೆ ಅತ್ಯಗತ್ಯವಾಗಿದೆ. ಆದರೂ, ಅವರಿಗೆ ಸಕಾಲದಲ್ಲಿ ವೇತನ ಪಾವತಿಯಾಗದಿರುವುದು ಸಮಸ್ಯೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ, ಬಾಕಿ ಇರುವ ವೇತನವನ್ನು ಬಿಡುಗಡೆ ಮಾಡಬೇಕು. ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸುವುದರ ಜೊತೆಗೆ, ಪ್ರತಿ ತಿಂಗಳ 5ನೇ ತಾರೀಕಿನೊಳಗೆ ಸಂಬಳ ಪಾವತಿಯಾಗುವಂತೆ ಏಕರೂಪದ ಮಾರ್ಗಸೂಚಿ ರೂಪಿಸಬೇಕು ಎಂದು ಸಿ.ಟಿ. ರವಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.



