HomeCrime Newsದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿ ಸಾವು! ತುಂಗಭದ್ರಾ ಹಿನ್ನೀರಿನಲ್ಲಿ ಮೃತದೇಹ ಪತ್ತೆ

ದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿ ಸಾವು! ತುಂಗಭದ್ರಾ ಹಿನ್ನೀರಿನಲ್ಲಿ ಮೃತದೇಹ ಪತ್ತೆ

For Dai;y Updates Join Our whatsapp Group

ಕೊಪ್ಪಳ: ದಸರಾ ಹಬ್ಬದ ದಿನವೇ ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಸಂಗೀತ ಮೇಟಿ ಮೃತಪಟ್ಟ ಶಿಕ್ಷಕಿ. ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಸಾವಿಗೂ ಮುನ್ನ ಬರೆದಿಟ್ಟಿದ್ದಾರೆ ಎಂದು ಹೇಳಲಾದ ಡೆತ್‌ನೋಟ್‌ನಲ್ಲಿ ಪ್ರೇಮ ಸಂಬಂಧ ಹಾಗೂ ಮದುವೆಗೆ ಎದುರಾಗಿದ್ದ ಅಡ್ಡಿಗಳ ಕುರಿತು ಉಲ್ಲೇಖಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸಂಗೀತ ಮೇಟಿ, ಅಕ್ಟೋಬರ್ 19ರಂದು ಕೊಪ್ಪಳಕ್ಕೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ಹೊರಟಿದ್ದರು. ಆದರೆ ಬಳಿಕ ಮನೆಗೆ ವಾಪಸಾಗಿರಲಿಲ್ಲ. ಅಕ್ಟೋಬರ್ 20ರ ಬೆಳಗ್ಗೆ ವಿಜಯನಗರ ಜಿಲ್ಲೆಯ ಗಡಿಭಾಗದಲ್ಲಿರುವ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಸಂಗೀತ ಮೇಟಿ ಸುಮಾರು 14 ವರ್ಷಗಳಿಂದ ತಮ್ಮ ಸಂಬಂಧಿ ವಿಕಾಸ್ ಎಂಬವರನ್ನು ಪ್ರೀತಿಸುತ್ತಿದ್ದರು ಎಂಬ ವಿಚಾರ ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಇವರಿಬ್ಬರ ಪ್ರೇಮ ಸಂಬಂಧದ ಬಗ್ಗೆ ಎರಡೂ ಕುಟುಂಬದವರಿಗೂ ಮಾಹಿತಿ ಇತ್ತು. ಆದರೆ ಮದುವೆಯ ವಿಚಾರ ಬಂದಾಗ ವಿಕಾಸ್ ಕುಟುಂಬದಲ್ಲಿ ಗೊಂದಲ ಉಂಟಾಗಿತ್ತು ಎಂದು ಸಂಗೀತ ತಮ್ಮ ಪತ್ರದಲ್ಲಿ ಬರೆದಿರುವುದಾಗಿ ಮಾಹಿತಿ ಲಭ್ಯವಾಗಿದೆ.

ವಿಕಾಸ್ ಅವರ ಸಹೋದರ ವಸಂತ್ ಹಾಗೂ ಆತನ ಪತ್ನಿ ರೇಣುಕಾ ಮದುವೆಗೆ ಅಡ್ಡಿಪಡಿಸುತ್ತಿದ್ದರು ಎಂದು ಸಂಗೀತ ಆರೋಪಿಸಿದ್ದಾರೆ. ಅಲ್ಲದೆ, ವಿಕಾಸ್, ವಸಂತ್ ಹಾಗೂ ರೇಣುಕಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಮೂವರಿಗೂ ಗಲ್ಲು ಶಿಕ್ಷೆಯಾಗಬೇಕು ಎಂದು ಡೆತ್‌ನೋಟ್‌ನಲ್ಲಿ ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.

ದೀರ್ಘಕಾಲದ ಪ್ರೇಮ ಸಂಬಂಧದ ಬಳಿಕ ಮದುವೆಗೆ ಎದುರಾದ ಅಡ್ಡಿಗಳಿಂದ ಸಂಗೀತ ಮಾನಸಿಕವಾಗಿ ನೊಂದಿದ್ದರೇ ಎಂಬ ಪ್ರಶ್ನೆ ಎದುರಾಗಿದೆ. ಆದರೆ ಅವರ ಸಾವಿಗೆ ನಿಖರವಾಗಿ ಯಾವ ಕಾರಣಗಳು ಪ್ರೇರಣೆಯಾಗಿವೆ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img